Wednesday, June 11, 2008

ಸ್ನೇಹ ನೀಡಿ ನಡೆಯುವವರೇ ಸ್ನೇಹಿತರು

ಸುಮಾರು ಬಾರಿ ಯಾರು ಹಿತವರು ಎನಗೆ? ಎಂದು ಪ್ರಶ್ನಿಸಿಕೊಂಡಾಗೆಲ್ಲ, ನನ್ನವರೆನ್ನುವ , ಎಂದುಕೊಂಡ ಅವನು ನನಗೆ ಯಾವತ್ತೂ ಯಾತಕ್ಕೂ ಆಗಿಲ್ಲ, ಮತ್ತು ಆಗುವುದಿಲ್ಲ ಎಂಬ ಸತ್ಯ ಹೊಳೆದು ಮನ ಮುದುಡುತ್ತದೆ. ನಾನು ಸದಾ ಪರಕೀಯರೆಂದು, ನಿರ್ವಿಕಾರಭಾವ ತೋರಿದವರು ನನ್ನ ಕೆಟ್ಟ ಸಮಯಕ್ಕೆ ಒದಗಿ ಬಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತೆ, ಆಗಾಧ ಪಟ್ಟುಕೊಳ್ಳುವಂತೆ, ವಿಚಿತ್ರವಾದ ವಿಸ್ಮಯದಿಂದ ಮೂಕಳಾಗುವಂತೆ ಮಾಡಿ, ನನ್ನನ್ನು ಮತ್ತೆ ಮತ್ತೆ ವಿಸ್ಮಯ ಮತ್ತು ವಿಭ್ರಮೆಗಳ ಸುಳಿಗೆ ಸಿಲುಕಿಸಿದ್ದಾರೆ. ಅವನ ಹತ್ತಿರ ಎನೆಲ್ಲ ಹೇಳಿಕೊಳ್ಳುವುದು ಇರುತ್ತದೆ, ಆದರೆ ಅವನಿಗೆ ನನಗಾಗಿ ಐದು ನಿಮಿಷಗಳೂ ಇಲ್ಲ. ಹೀಗೆ, ಇಂಥ ತೊಂದರೆಯಾಗಿದೆ, ಎಂದು ಉಸುರುವ ನೋವೂ ನನ್ನದೇ ಗಂಟಲಲ್ಲಿ ಉಳಿದು , ಹೇಳಬಾರದ ಇನ್ಯಾರಿಗೋ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತದೆ. ಯಾಕೆ ಅವನಿಗೆ ನನ್ನ ಇರುವಿಕೆಯ ಆಭಾಸವಾಗಲೀ, ಅಗತ್ಯವಾಗಲಿ ಇಲ್ಲವೇ? ಯಾವ ಪುರುಷಾರ್ಥಕ್ಕೆ ನನಗೆ ಅವ ’ನನ್ನವ’ನೆಂದು ಹೇಳಿಕೊಳ್ಳಲಿ ? ಆತನ ಆಗು-ಹೋಗುಗಳ ನಡುವೆ ನಾನಿಲ್ಲ, ಅವನ ಅರಳುವ ಬೆಳಗಿನ ಮುಸುಕಿನಲ್ಲಿ ನನ್ನ ನೆನಪಿಲ್ಲ, ಕಂದುವ ಇರುಳೀನಲ್ಲೂ ನನ್ನ ನೆನೆಯುವಿಕೆಯ ಕುರುಹಿಲ್ಲ. ಅಂಥವನನ್ನು ಇನ್ನೂ ನನ್ನವ ನನ್ನವನೆಂದು ಪರದಾದುತ್ತೇನಲ್ಲವೆನಿಸಿ ನನಗೆ ನಾನೆ ಬೈದುಕೊಳ್ಳುತ್ತೇನೆ. ದೂರದ ಇನ್ಯಾರೋ ನನಗೆ ಬೇಕಿಲ್ಲದ ಇನ್ಯಾರೋ ನನ್ನವರೆಂಬ ಕಳಕಳಿಯಿಂದಲೋ, ಅನುಕಂಪದಿಂದಲೋ, ಯಾವುದೋ ಹೆಸರಿಲ್ಲದ ಭಾವನೆಯೊಂದಿಗೆ ಎನಾದರೂ ಮಾಡಿದಾಗ ನನಗೇ ದಿಕ್ಕು ತಪ್ಪಿದ, ಯಾವುದೋ ಹಾದಿ ತಪ್ಪಿ ಬಂದ ಅನುಭವ ನೋವುಕೊಡುತ್ತದೆ. ಹಾಗೆ ಒಂದು ಥ್ಯಾಂಕ್ಸ್ ಹೇಳಿ, ಮುಗುಳ್ನಕ್ಕು ನನ್ನ ಮಂಜು ಮಾಂಜಾದ ನೋಟದೊಳಗೆ ಅವನು ಮರೆಯಾಗದಂತೆ ಮರುಕಳಿಸಿಕೊಂಡಂತೆ, ಯಾರೋ ನೀಡಿದ ನೋವು ಮೀಟಿ ತಲ್ಲಣಿಸುವಂತೆ ತೊಳಲಾಡುತ್ತಿರುತ್ತೇನೆ. ಇದೆಲ್ಲ ನಿನಗೆ ಯಾಕೆ ಅರ್ಥವಾಗುವುದಿಲ್ಲ?

ಸುಮ್ಮನೆ ಒದ್ದಾಡುವದಕ್ಕಿಂತ, ನಿನ್ನ ಜೊತೆ ವಾದಿಸಿ ,ಸೈಕಿ ಎನ್ನಿಸಿಕೊಳ್ಳುವುದಕ್ಕಿಂತ ಮೌನವಾಗಿರುವುದೇ ಕ್ಷೇಮ, ಸಮಯ ಹೇಗೆ ನಡೆಸಿಕೊಂಡು ಹೋಗುತ್ತದೋ ಹೋಗಲಿ, ಅನುಬಂಧ ಎಲ್ಲಿವರೆಗೆ ಕೈ ಹಿಡಿದು ನಡೆಸುತ್ತದೋ ನಡೆಸಲಿ. ಯಾವಾಗ ನಿನಗೆ ನನ್ನ ಇರುವಿಕೆಯ ನವಿರಾದ ಭಾವ, ಸ್ನೇಹ, ಉಕ್ಕುವ ಪ್ರೇಮ , ಅನುಭವ, ಅಗತ್ಯ ಕಾಣುತ್ತದೋ, ಆಗ ನಾ ಅನುಭವಿಸಿದ ನೋವುಗಳೆಲ್ಲ ನಿನ್ನವಾಗಿ, ಖಾಲಿತನದ ಶೂನ್ಯ ಬಿಂದುವಿನಲ್ಲಿ ನನ್ನನರಸುವ ನಿನ್ನ ಕಣ್ಣುಗಳಿಗಾಗಿ ನಾ ಕಾಯುತ್ತಿರುತ್ತೇನೆ ಇಂಥವೇ ಹಲ ಕೆಲ ಸ್ವಗತಗಳಲ್ಲಿ.
ಇದ್ದೂ ಇಲ್ಲದಂತಿರುವ ನರಳಿಕೆಗಿಂತ ಇಲ್ಲದೆಯೂ ಇದ್ದೆನೆನ್ನುವ ಬೆಚ್ಚನೆಯ ಸ್ನೇಹ ಎಷ್ಟು ಸುಂದರವಲ್ಲವಾ?

Wednesday, May 14, 2008

ಎದೆಯು ಮರಳಿ ತೊಳಲುತಿದೆ

ಎದೆಯು ಮರಳಿ ತೊಳಲುತಿದೆ,
ದೊರೆಯುದದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿಬಾಳು ಚಾಚುತಿದೆ
ತನ್ನ ಕುಡಿಯನು.

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು.

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟದಲಿದೆ ಮನದಲಿ !

ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ ?

ಯಾವ ಬಲವು ಯಾವ ಒಲವು
ಕಾಯಬೇಕೋ ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ ?

----- ಎಮ್. ಗೋಪಾಲಕೃಷ್ಣ ಅಡಿಗ.

Wednesday, April 30, 2008

ವಚನ

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯ


ಹರಿಯುವ ಹೊಳೆಗೆ ಮೈಯೆಲ್ಲ ಕಾಲೇ ಆಗಿರುವಂತೆ, ಉರಿವ ಬೆಂಕಿಗೆ ಮೈಯೆಲ್ಲ ಬಾಯೇ ಆಗಿರುವಂತೆ, ಬೀಸುವ ಗಾಳಿಗೆ ಮೈಯೆಲ್ಲ ಕೈಯೇ ಆಗಿರುವಂತೆ ನಿಜವಾದ ಶರಣ, ಲಿಂಗದೊಡನೆ, ಇಡೀ ಸೃಷ್ಟಿಯೊಡನೆ ಒಂದಾದವನಾದ್ದರಿಂದ ಅವನ ಸರ್ವಾಂಗವೂ ಲಿಂಗವೇ. ಅವನು ಬೇರೆಯಲ್ಲ, ಲಿಂಗ ಬೇರೆಯಲ್ಲ.
ಎರಡಿಲ್ಲದ ಐಕ್ಯದ ಸ್ಥಿತಿಯನ್ನು ಅಲ್ಲಮನ ಈ ವಚನ ವಿವರಿಸುತ್ತದೆ. ( ಕೆಂಡಸಂಪಿಗೆಯಿಂದ)

ಬಿಂದಿಯಾ -೨

ದಿನವೂ ಹೊಸತು, ಪ್ರತಿದಿನ ಉದಯಿಸುವ ಸೂರ್ಯ ಹೊಸತು, ಚಂದ್ರನ ಬೆಳಕು ಹೊಸತು, ದಿನವೂ ಅರಳುವ ಹೂವು ಹೊಸತು, ಮಿನುಗುವ ಚುಕ್ಕಿ , ಕೋಗಿಲೆ ಹಾಡಿನ ಜಾಡು, ನಾವು ಆಡುವ ಮಾತು ಹೊಸತಾಗಿಯೇ ಇರುತ್ತದೆ. ಹಳತಾಗಿರುವುದಿಲ್ಲ. ಹಾಗೆ ನೋಡಿದರೆ ಹಳತಾವುದೂ ಇಲ್ಲವೇ ಇಲ್ಲ. ದಿನವೂ ಚುಮು ಚುಮು ಮುಂಜಾನೆ ಸುಪ್ರಭಾತದ ಮೊದಲ ಕಿರಣ ನೆಲಕ್ಕೆ ತಾಕುವವರೆಗೂ ಹಳತಾಗಿ ಕತ್ತಲೆಯಲ್ಲಿ ಅಡಗಿದ್ದ ಎಲ್ಲವೂ ಹೊಸತಾಗಿ ನಳನಳಿಸತೊಡಗುತ್ತದೆ. ಆದರೂ ಹಳತಾಗಿರುವುದು ನಮ್ಮ ಮನದಲ್ಲಿನ ಹಳಹಳಿಕೆ, ಅಪೂರ್ಣವಾದ ಕನಸು ಪೂರ್ತಿಯಾಗದ ಹಳಹಳಿಕೆಯಲ್ಲಿ ಮನಸ್ಸಿಗೆ ಮಾತ್ರ ಮುತ್ತಿರುತ್ತೆ. ಹೀಗೆ ಯೋಚಿಸುವ ಮನಸ್ಸು ಬುದ್ಧಿಗೆ ಕಡಿವಾಣ ಹಾಕಬೇಕೆಂದರೂ ಅದೂ ನಮ್ಮ ಕೈಲಿಲ್ಲವಲ್ಲ. ಯೋಚನೆಗಳ ಉಗ್ರಾಣ ಈ ಮನಸ್ಸು. ಸದಾ ಕಾರ್ಖಾನೆಯಂತೆ ನಡೆಯುತ್ತಲೇ ಇರುತ್ತದೆ. ಕಿರಿ ಕಿರಿಯಾಗಿ ಒಮ್ಮೆ, ಹಿರಿ ಹಿರಿ ಹಿಗ್ಗಾಗಿ ಒಮ್ಮೆ.
ನಿನ್ನೆ ತನಗೆ ಫ್ರೆಂಚ್ ಕೋರ್ಸ ನಲ್ಲಿ ಒಳ್ಳೆ ಅಂಕ ಬಂದಿದೆಯೆಂದು ಬಿಂದಿಯಾ ಟ್ರೀಟ್ ಕೊಟ್ಟಳು. ಹಾಗೇ ಅವಳ ಇನ್ನೂ ಕೆಲವು ಟ್ರೀಟ್ ಗಳು ಬಾಕಿ ಇವೆ. ನಾನು ಹಾಗೆ ತಿಂಡಿಪೋತಿಯೂ ಅಲ್ಲ, ನನಗೆ ಟ್ರೀಟ್ ಹೆಸರಿನಲ್ಲಿ ಸುಮ್ಮ ಸುಮ್ಮನೇ ಖರ್ಚುಮಾಡುವುದೂ, ಮಾಡಿಸುವುದೂ ಇಷ್ಟವಿಲ್ಲ. ಆಫೀಸಿನ ಹತ್ತಿರದ ಕೈಲಾಸ್ ಕಾಲೋನಿ ಮಾರ್ಕೆಟ್ಟಿನಲ್ಲಿನ’ಅನುಪಮ್’ ರೆಸ್ಟೋರಾಂಟ್ ನಲ್ಲಿ ಇಬ್ಬರೂ ಛೋಲೆ ಭಟೂರಾ, ಹಾಗೂ ಒನ್ ಬೈ ಟೂ ಮಾಡಿ ಅನ್ನ- ಮಖನೀ ದಾಲ್ ತಗೊಂಡೆವು. ಅದೂ ಇದೂ ಆಫೀಸಿನ ಗಾಸಿಪ್ ಮಾಡುತ್ತಾ, ಅವರಿವರ ರೆಸಿಗ್ನೇಶನ್ನು, ಪ್ರೋಮೋಶನ್ನು ಇತ್ಯಾದಿಗಳನ್ನು ಮಾತಾಡುತ್ತಾ ಉಣ್ಣುತ್ತಿದ್ದೇವು.
ನಡುವೆಯೇ ನೆನಪಾಯಿತು ಮೊನ್ನೆ ಮೊನ್ನೆ ಬಿಂದಿಯ ವೇದನ ಬಗ್ಗೆ ಹೇಳುತ್ತಿದ್ದಳು- ಅವನಿಗೆ ಹುಷಾರಿಲ್ಲ, ಬ್ರಿಟನ್ನಿಂದಾ ಮಾತಾಡಿದ, ತುಂಬಾ ಮಿಸ್ ಮಾಡ್ತಾನಂತೆ ಅವಳನ್ನು, SMS ಮಾಡ್ತಾ ಇರ್ತಾನೆ, ನಾನೂ ಅವನಿಗೆ ಸಮಾಧಾನ ಹೇಳಿದೆ, Afterall , ನಾನವನೊಂದಿಗೆ ಭಾವಹೀನಳಂತಿರಲು ಹೇಗೆ ಸಾಧ್ಯ? ಮಗೂನ ನೋಡ್ಕೊತಾನಲ್ಲಾ, ಚೆನ್ನಾಗಿ ನೋಡ್ಕೊಬೇಕು. ನಾನಿದ್ದರೇ ಅವನನ್ನು ಚೆನ್ನಾಗಿ ನೋಡ್ಕೊತಿದ್ದೆ. ಈಗ ಅವನಿಗೆ ಹಾಗನ್ನಿಸುತ್ತಿದೆ. ನನಗೂ ಅನ್ನಿಸುತ್ತದೆ ಯಾರ್, ಕಡೇ ಪಕ್ಷ ಅವನಿಗೆ ನಾನು ಇಂಪಾರ್ಟೆನ್ಸ್ ಕೋಡ್ತಿನಿ, ಈಗ ಅವನಿಗೆ ನನ್ನ ಬಗ್ಗೆ ತುಂಬಾ ಪ್ರೀತಿ, ಅನುಕಂಪ. ನನಗೆ ವಾಪಸ್ಸು ಬಾ’ ಅಂದಾ.....ಹಾಗೇ ಬೇರೆ ಪ್ರೋಪೋಸಲ್ ಗಳೂ ಬಂದಿದ್ವು, ಆದ್ರೆ ನಾನೇ ಯಾವುದಕ್ಕೂ ಮನಸ್ಸು ಮಾಡ್ತಿಲ್ಲ. ವೇದನನ್ನು ಗೊತ್ತಿರುವಂತೆ, ಹೊಸಬನೊಂದಿಗೆ ಹೊಸ ಜೀವನ ಯೋಚಿಸುವುದಕ್ಕೆ ಸಮಯ ಬೇಕು ಎನ್ನುತ್ತಿದ್ದಳು. ನಾನೂ ಹೇಳಿದೆ, ಹೌದು, dont take any hasty decision at any condition ಎಂದು ಮಾತು ಮುಗಿಸಿದೆ.
ಇದೇ ಬಿಂದಿಯಾ ಎಂಟು ತಿಂಗಳ ಹಿಂದೆ , ತುಂಬಾ ಖುಶಿಯಲ್ಲಿ ಓಡಿ ಬಂದು ತನಗೆ ವೇದನಿಂದ ಡೈವೋರ್ಸ್ ಸಿಕ್ಕಿತೆಂದೂ ಹೇಳಿ, ನಾನವಳೀಗೆ ಗುಡ್ ಎಂದು ಕೈ ಕುಲುಕಿ ಶುಭ ಕೋರಿ, ಹಾರ್ದಿಕವಾಗಿ ಅಭಿನಂದಿಸಿ ಕಳಿಸಿದ್ದೆ. ನನಗೇನಂತೆ ಅಲ್ಲವಾ? ಅದು ಅವಳ ಬದುಕು. ಅವಳಿಗೆ ಹೇಗೆ ಬೇಕೋ ಹಾಗೆ ಬದುಕಲಿ. ಆದರೆ ಆಶ್ಚರ್ಯವುಂಟಾಗಿದ್ದು- ಇಷ್ಟು ಬೇಗ ಅವಳಿಗೆ ಡೈವೋರ್ಸ್ ಸಿಕ್ಕಿ ಬಿಟ್ಟಿತಾ? ಅದೂ ನಮ್ಮ ಭಾರತದಂಥ ದೇಶದಲ್ಲಿ. ಎಷ್ಟೋ ವರುಷಗಳೇ ನ್ಯಾಯದ ಹಾದಿ ಕಾಯುತ್ತ ಕುಳಿತ ಕೇಸುಗಳು, ಆರೋಪಗಳು. ಆಯುಷ್ಯ ಮುಗಿದರೂ ತೀರದ ವ್ಯಾಜ್ಯಗಳು ತುಂಬಿದ ನಮ್ಮ ವ್ಯವಸ್ಥೆಯಲ್ಲಿ ಬಿಂದಿಯಾಗೆ ಇಷ್ಟು ಬೇಗ ಡೈವೊರ್ಸ್ ಸಿಕ್ಕಿ ಬಿಟ್ಟಿತಾ ಎಂಬ ಆಶ್ಚರ್ಯ ನನ್ನ ಮನದಲ್ಲಿ ಇದೆ. ನಾನು ಅವಳಲ್ಲಿ ಅಸಭ್ಯವಾದೀತೆಂದು ಹೆದರಿ ಬಾಯಿಬಿಟ್ಟು ಕೇಳಲಿಲ್ಲ. ಅವಳ ಸಂತೋಷದೊಂದಿಗೆ ನನ್ನ ಸಂತಸವನ್ನೂ ಬೆರೆಸಿ ಟ್ರೀಟ್ ಯಾವಾಗ ಮತ್ತೆ ಎಂದು ನಕ್ಕು, be careful this time, dont take any hasty decision ಅಂತಾ ಮತ್ತೊಮ್ಮೆ ಎಚ್ಚರಿಸಿದ್ದೆ. ಏನೋ ಅರ್ಥವಾಗುವುದಿಲ್ಲ. ಈಗೀನ ಹುಡುಗಿಯರು ನಿಜ ಹೇಳುತ್ತಾರೋ ಅಥ್ವಾ ನನ್ನಂತಾ ಎಲ್ಲ ನಂಬುವ ಗೂಬೆಯೊಂದು ಸಿಕ್ಕಿದೆಯೆಂಡು ತನ್ನ ಕಪೋಲಕಲ್ಪಿತ ಕಥೆಗಳನ್ನು, ಕನಸುಗಳನ್ನು ಹೀಗೆ ಮುಕ್ತವಾಗಿ, ಇತರರಿಗೆ ನಿಜವೆಂದು ತೋರುವ ಕತೆಯನ್ನಾಗಿಸಿ ಹೇಳುತ್ತಾರೋ ಗೊತ್ತಾಗಲಿಲ್ಲ. ಖಂಡಿತ ನನಗೆ ಅಂಥ ಕಥೆಗಳಲ್ಲಿ ಆಸಕ್ತಿ ಇಲ್ಲ. ನನ್ನ ಕಿವಿ ಕೇಳಿದ ಮೇಲೆ ಅವು ಇತರರಿಗೆ ರವಾನೆಯಾಗುವುದಿಲ್ಲ. ನನ್ನಲ್ಲೇ ಅಡಗಿಸಿಡುತ್ತೇನೆ. ಯಾಕೆ ಬೇಕು ಇಲ್ಲದ ಉಸಾಬರೀ ? ಆಫಿಸಿನ ಗಾಸಿಪ್ ರಂಗಾಗುವುದೇ ಹೀಗೆ. ಹೇಸಿಗೆ ಬರುತ್ತದೆ.
ಬಸ್ ಸ್ಟಾಪ್ ನಲ್ಲಿ ಸಿಕ್ಕ ಮಲೆಯಾಳಿ ವಸಂತಾ, ನೀನು ಬಿಂದಿಯಾಳೊಂದಿಗೆ ಜಾಸ್ತಿ ಮಾತಾಡಬೇಡ, ಎಲ್ಲಾ ಸುಳ್ಳು ಸುಳ್ಳು ಸುದ್ದಿ ಹಬ್ಬಿಸ್ತಾಳೇ. ಅವರಿವರ ಬಗ್ಗೆ ಚಾಡಿ, ಅಲ್ಲಿಂದ ಇಲ್ಲಿ, ಇಲ್ಲಿಂದಾ ಅಲ್ಲಿ’ ಎಂದು ಎಚ್ಚರಿಸಿ ಹೋದಳು. ಅಬ್ಬಾ ಅಂದುಕೊಂಡೆ. ಅವಳು ನನ್ನ ಹತ್ತಿರ ಬಂದು ಹೋದ ಸುದ್ದಿ ಇವರಿಗೆಲ್ಲ ಸಿಕ್ಕಿರುತ್ತೆ. ಇವಳು ಕೂರುವುದು ಮೊದಲನೇ ಮಹಡಿಯಲ್ಲಿ, ನಾನಿರುವುದು ನಾಲ್ಕನೇ ಮಹಡಿ, ಹೇಗೆ ವಾಸನೆ ಬಡಿದಿದೆ’ ಎಂದುಕೊಂಡು ಸುಮ್ಮನುಳಿದೆ. ಇವತ್ತು ನಾನು -ಬಿಂದಿಯಾ ಅನುಪಮ್ ಗೆ ಹೋದ ನಂತರ ಏನು ಸುದ್ದಿ ಮಾಡ್ತಾರೋ ಗೊತ್ತಿಲ್ಲ. ಯಾಕೋ ಅವಳಿಗೆ ನನ್ನ ಮೇಲೆ ಒಂಥರಾ ಸಲುಗೆ, ನಂಬಿಕೆ. ಅವಳ ಬಕವಾಸ್ ಮಾತುಗಳಿಗೆ ಕಿವಿಯಾಗುತ್ತೇನೆ. ಮೌನವಾಗುತ್ತೇನೆ, ಖಾಲಿಯಾಗಿಬಿಡುತ್ತೇನೆ. ಹೇಳಿಕೊಳ್ಳಲಿ ಬಿಡು ಎನ್ನುವಂತೆ. ಅವಳು ಏನಾದರೂ ಇದ್ದುಕೊಳ್ಳಲಿ ನನ್ನ ಒಂಟಿತನದಲ್ಲಿ ಯಾರಾದರೊಬ್ಬರೊಡನೆ ಹರಟ ಬೇಕು ಎನ್ಸಿದಾಗೆಲ್ಲ ಅವಳು ನನಗೆ, ಯಾರಾದರೊಬ್ಬರ ಹ ತ್ತಿರ ಕೊಚ್ಚಿಕೊಳ್ಳಬೇಕು ಎಂದು ಅವಳಿಗೆ ಅನಿಸಿದಾಗ ನಾನು -ಹೀಗೆ ಒಬ್ಬರೊಬ್ಬರಿಗೆ ಹಿತವಾಗಿದ್ದೇವೆ. ಉಳಿದ ಹೆಣ್ಣು ಕಲೀಗ್ಸ್ ತರಹಾ ಜಗಳಾಟವೂ ಇಲ್ಲ, ಕಚ್ಚಾಟವೂ ಇಲ್ಲ.
ಊಟ ಮಾಡುತ್ತಲೂ ನಾನು ಅವಳ ಮತ್ತು ವೇದನ ಕುರಿತೇ ಯೋಚಿಸುತ್ತಿದ್ದೆ. ಬಿಂದಿಯಾ ನಿನಗೆ ವೇದನ ಜೊತೆಗೇ ಇರಬೇಕೂ ಅಂದ್ರೆ ಇರು, ಇದು ಒಳ್ಳೆ ನಿರ್ಧಾರ. ನಿನ್ನ ಮಗನೂ ನಿನ್ನ ಹತ್ತಿರವಿರ್ತಾನೆ. ’ಎಂದಿಷ್ಟೇ ಹೇಳಿ. ಅವಳ ಕತೆ ಕಟ್ಟಿಕೊಂಡು ನನಗೆ ಏನಾಗಬೇಕಿದೆ. ನಾವು ಕಳಕಳಿ ತೋರಿಸಿದರೇ ಅವಳಿಗೆ ಅದು ಅಸಹಜ ಕುತೂಹಲವೆನ್ನಿಸಬಹುದು. ಸದಾ ನಿಗೂಡವಾಗಿ, ಸದಾ ಹೊಸದಾಗಿ , ಕಾಣುವ ಬಿಂದಿಯಾಳ ಮೊಗವನ್ನೇ ನೋಡುತ್ತಾ ಯೋಚನೆಯಲ್ಲಿ ಮುಳುಗಿದೆ.

Wednesday, April 16, 2008

ಕನಸಿನೊಳಗೊಂದು ಕಣಸು - ಬೇಂದ್ರೆ ಕವನ

ಕನಸಿನೊಳಗೊಂದು ಕಣಸು
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"

"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"

"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"

"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?

"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"

"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"

"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"

"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"

"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"

"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"

"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"

"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"

"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?

"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"

"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ

"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"

"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು

ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

Tuesday, April 15, 2008

ಪುಟ್ಟಿ, ನಾನು ಮತ್ತು ಗುಬ್ಬೀ ಗೂಡು.

ಇವತ್ತು ತಂಗಿ ಹೇಳುತ್ತಿದ್ದಳು. ನಿನ್ನೆ ಮನೆಗೆ ಅನು ಹುಟ್ಟಿದ ಹಬ್ಬಕ್ಕೆ ಹೇಳಿ ಕಳಿಸಿದವರಂತೆ ಪುಟ್ಟಿ, ಉಷಿ, ಅವಳ ಗೆಳತಿಯರು ಎಲ್ಲ ಬಂದಿದ್ದರಂತೆ. ನಾನು ದೂರದ ದೆಹಲಿಯಲ್ಲಿ ಕುಳಿತು, ಎಷ್ಟೋ ವರ್ಷಗಳಾದವು, ಯುಗಗಳೇ ಕಳೆದು ಹೋದಂತಿವೆ. ನಾನೆಂಥ ಪಾಪಿಗೇಡಿ ಅಂದುಕೊಂಡೆ. ನನಗೆ ಒಮ್ಮೆಯೂ ನನ್ನ ಬಾಲ್ಯದ ಗೆಳತಿಯರು ಸಿಗುವುದಿಲ್ಲ. ಹಾಗೇ ನನ್ನ ಬಾಲ್ಯದ ಒಡನಾಡಿ ಪುಟ್ಟಿ ನೆನಪಾದಳು. ಧಾರವಾಡದಲ್ಲಿ ಮಳೆಯಾಗಿ, ನೆಲವೆಲ್ಲ ಅರಳಿ, ಹಸಿರು ಹಚ್ಚಗೇ ಕೊನರುವುದೇ ತಡ, ನಾವು ಮಕ್ಕಳು ಮನೆ ಅಂಗಳದಲ್ಲಿ ಮಣ್ಣು ಕೆದರಿ ಗುಬ್ಬಿ ಗೂಡು ಕಟ್ಟಲು ತೊಡಗುತ್ತಿದ್ದೇವು. ಮುಂಗೈಯನ್ನು ಡುಬರಿಯಾಕಾರ ವಾಗಿಸಿ ಇಟ್ಟು, ಮೇಲೆ ಮೆದುವಾದ ಮಣ್ನನ್ನು ಹಾಕಿ ಒತ್ತುತ್ತಾ, ಪಿರಮಿಡ್ಡಿನಾಕಾರ ಕೊಟ್ಟು ನಂತರ ಸಾವಕಾಶವಾಗಿ ಕೈ ತೆಗೆದರೆ ಸಾಕು, ಹಾರಿ ಕುಣಿಯುವಂತೆ ಚೆಂದದ ಗುಬ್ಬಿ ಗೂಡು ಎದ್ದು ನಿಲ್ಲುತ್ತಿತ್ತು. ಅದಕ್ಕೆ ಸುತ್ತ ಮುತ್ತ ಕಾಲುದಾರಿ, ಗೇಟು, ಇತ್ಯಾದಿಯಾಗಿ ತರ ತರದ ಅಂದಚೆಂದ ಮಾಡಿ, ನನ್ನ ಗೂಡು ನೋಡ್ಲೇ, ನಿನ್ನ ಗೂಡು ಹ್ಯಾಂಗಿದೆ? ಅಂತಾ ಆಡುತ್ತಿದ್ದುದು ನೆನ್ಪಾಯಿತು.
ಪುಟ್ಟಿ ನಮ್ಮ ಎದುರು ಮನೆ ಇಂದಿರಾ ಕಾಕುನ ಎರಡನೇ ಮಗಳು. ನನಗೆ ಸದಾ ಅವರ ಮನೆಯಲ್ಲೇ ವಾಸ. ತಿಂಡಿತಿಂದು ಪುಟಕ್ ಅಂತಾ ಅವರ ಮನೆಗೆ ಹಾರುತ್ತಿದ್ದೆ. ಪುಟ್ಟಿ ತಂದೆ, ನನ್ನ ಮೆಚ್ಚಿನ ಕಾಕಾ. ಅವರು ನಮಗೆ ಹೇಲುತ್ತಿದ್ದ ಕಥೆಗಳು ಈಗಲೂ ನೆನಪಿವೆ. ಅಲೀ ಬಾಬಾ ಚಾಲೀಸ್ ಚೋರ್ ಕತೆ ಆಗಲೇ ನಾನು ಕೇಳಿದ್ದು. ಬೇಸರವಿಲ್ಲದೇ ಕಥೆ ಹೇಳುತ್ತಿದ್ದರು. ನನ್ನ ಅಪ್ಪನೂ ಕಥೆ ಹೇಳುತ್ತಿದ್ದರು. ಮಂಗ ಮತ್ತು ಸಿಂಪಿಗನ ಕಥೆ, ಹುಲಿ ಮತ್ತು ಮಂಗಮ್ಮನ ಕಥೆ, ಮಂಗ ಮತ್ತು ಮೊಸಳೆ ಕತೆ, ಒಂದೇ ಎರಡೇ ಕೇಳಿದ ಕಥೆಗಳು ಇನ್ನೂ ನೆನಪಿನಾಳದಲ್ಲಿ ಸುಮಧುರ ನೆನಪನ್ನು ಹೆಣೆದಿವೆ. ಕತೆ ಹೇಳಿ ಮಲಗಿಸುವ ಅಪ್ಪ ನೆನಪಾದರೇ ಯಾಕೆ ಬಾಲ್ಯಕ್ಕಿರುವ ನಿಶ್ಚಿಂತ ಬದುಕಿನ ಪ್ರೀತಿ, ಚೆಲುವು, ಚೈತನ್ಯ ಮುಂದೆ ಬೆಳೆದು ದೊಡ್ಡವರಾದಂತೆ ಕ್ಷೀಣವಾಗುತ್ತದೆ. ಚಿಂತೆ -ಜಂಜಾಟಗಳು ಬದುಕಿನ ಮೂಲ ಉಪದ್ರಗಳಾಗುತ್ತವೆ ಎನಿಸುತ್ತಿದೆ. ಪುಟ್ಟಿ, ಉಷಿಯರನ್ನು ನೋಡದೇ ಎರ್ಡು ದಶಕಗಳೇ ಕಳೆದುವು. ಯಾವಾಗ ನೋಡ್ತೇನೋ ಗೊತ್ತಿಲ್ಲ. ಅವರೂ ತಮ್ಮ ತಮ್ಮ ಬದುಕಿನಲ್ಲಿ ಮರೆತುಹೋಗಿರಬಹುದು. ಮರೆತಿಲ್ಲವಾದರೂ ಮರೆಸುವಂಥ ಬದುಕಿನ ತಲ್ಲಣಗಳಿಗೇನು ಕಡಿಮೆಯೇ ? ಮಕ್ಕಳು ಮರೀ, ಸಂಸಾರದ ಹತ್ತು ಹಲವು ಸಮಸ್ಯೆಗಳು. ಇಷ್ಟೆಲ್ಲ ಆದರೂ ಈಗ ಮಾತ್ರ ನಾನು ಜೀವನದಲ್ಲಿ ಏನೋ ಅಮೂಲ್ಯವಾದುದನ್ನು, ಆಪ್ತವಾದುದನ್ನು, ಪಂಚಪ್ರಾಣವಾದುದನ್ನು ಏನೋ ನನ್ನ ಊರಿನಲ್ಲಿ ಬಿಟ್ಟು ಬಂದಿದ್ದೇನೆ. ನನ್ನದಾದುದನ್ನು, ನನ್ನದೆನ್ನುವ ಎಲ್ಲವನ್ನೂ ಬಿಟ್ಟು ಪರದೇಸಿಯಾಗಿದ್ದೇನೆ, ಏಕಾಂಗಿಯಾಗಿದ್ದೇನೆ ಎನಿಸತೊಡಗಿ ಕಳೆದುಕೊಂಡ ದುಃಖ ಒತ್ತತೊಡಗಿತು.
ಕಾಕಾನ ತೊಡೆಯೇರಿ ಕುಳಿತು ಬಾಚಣಿಗೆಯಿಂದ ಅವನ ಕೂದಲು ಬಾಚಿದ್ದೇ ಬಾಚಿದ್ದು. ಕಾಕಾನಿಗೆ ಬಾಚುವುದೆಂದರೇ ಏನೋ ಖುಶಿ. ಒಂದು ದಿನವೂ ಕಾಕಾ ಬೇಸರಿಸಿ ಬೈದಿದ್ದಿಲ್ಲ. ಈಗ ಅದೇ ಕಾಕಾ ಮಾತಾಡುವುದಿಲ್ಲ. ಹಾಗೆಂದುಕೊಳ್ಳಲೂ ಮನಸ್ಸಿಗೆ ನೋವಾಗುತ್ತದೆ. ವಯಸ್ಸಾಗಿ ಹೋಗಿ, ಪಿರಿ ಪಿರಿ ಸ್ವಭಾವವಾಗಿಬಿಟ್ಟಿದೆ. ಕಾಕೂ ತೀರಿಹೋಗಿ ನಾಲಕೈದು ವರ್ಷಗಳೇ ಆದುವು. ಇಡೀ ಮನೆತುಂಬ ಓಡಾಡುತ್ತಿದ್ದುದು, ದತ್ತಾತ್ರಯ ಗುಡಿ ಹತ್ತಿರ ಹೋಗಿ ಹೂವು ಕೊಂಡು ಬರುತ್ತಿದ್ದುದು, ಅಟ್ತ ಹತ್ತಿ ಇಳಿದು ಬೈಸಿಕೊಳ್ಳುವುದು, ಮಣ್ಣಲ್ಲಿ ಗೂಡು ಕಟ್ಟಿ ಆಡುವುದು, ಜಗಳಾಡಿಕೊಂಡು ಒಬ್ಬರ ತಲೆಮೇಲೆ ಇನ್ನೊಬ್ಬರು ,ಮಣ್ಣು ಸುರಿದು, ಅವ್ವಂದಿರ ಕೈಲಿ ಬೈಸಿಕೊಂಡು, ಕೊನೆಗೆ ಅವರೂ ಜಗಳಾಡಿಕೊಳ್ಳುವುದು. ನಾಗರ ಪಂಚಮಿಗೆ ಮನೆ ಮನೆಯಲ್ಲಿ ಕಟ್ಟಿದ ಜೋಕಾಲಿ ತೂಗಿ ತೂಗಿ ಆಡಿ, ತಿಂಗಳುಗಟ್ಟಲೇ ಜೋಕಾಲಿ ಬಿಚ್ಚದೇ ಹಾಗೇ ಆಡಿಕೊಂಡಿರುವುದು. ಎಲ್ಲ ನೆನಪಾಗುತ್ತದೆ.
ಇನ್ನೊಮ್ಮೆ ಊರಿಗೆ ಹೋದರೆ ಎಲ್ಲರನ್ನೂ ಕಂಡು ಭೆಟ್ಟಿಯಾಗಿ ಬರಬೇಕು........

Friday, April 11, 2008

ಕನಸು ಮತ್ತು ಹಳವಂಡಗಳ ನಡುವೆ....

ಕುಡಿಗಣ್ಣಿನಲ್ಲಿ ಕದ್ದು ಕದ್ದು ನೋಡುತ್ತ, ಒಳ್ಗೊಳಗೇ ಮುಸಿಮುಸಿ ನಗುವ ಅವಳು, ಮತ್ತೆ ಮತ್ತೆ ಏನನ್ನೋ ನೆನೆದು ಮೀಸೆಯಡಿಯಲ್ಲಿ ಗೆರೆಯಾಗಿ ಮೂಡುವ ನಗುವನ್ನು ತುಟಿ ಬಿಗಿದು ಅಡಗಿಸಲು ಪ್ರಯತ್ನಿಸುವ ಅವನೂ ಅವರಿಬ್ಬರ ಮಧ್ಯೆ ಸುಮ್ಮನೇ ಕುಳಿತ ತುಂಟ ಮೌನ ಬಹಳ ಹೊತ್ತಿನಿಂದ ಕಾಯುತ್ತಿತ್ತು. ಹಾಗೇ ಅವರಿಬ್ಬರನ್ನು ವರ ತುಂಟತನವನ್ನೂ ನೋಡುವುದೆಂದರೆ ತುಂಬಾ ಮಜಾ.ಎಲ್ಲವನ್ನೂ ನೋಡುತ್ತ ಕೊನೆಗೆ ತಾನೇ ಸೋತವಳಂತೆ ಅವನೆದುರು ಬಂದು ಕೂತಳು. ಹಠ ಹಿಡಿದವಳಂತೆ ಅವನನ್ನು ತನ್ನೆಡೆಗೆ ಜಗ್ಗಿಸಿಕೊಂಡು ಕೇಳಿದಳು,

’ಈಗಲಾದರೂ ಹೇಳು, ನಿನಗಾಗಿ ನಾನೇನು ಮಾಡೊಲ್ಲ.? ಎಲ್ಲಾನ್ನೂ ಮಾಡೊಕ್ಕೆ ರೇಡಿ ಕಣೋ. ನೀ ಒಂದ್ಸಲ ನನ್ನ ಇಲ್ಲಿಂದ ಕರಕ್ಕೊಂಡಾದ್ರೂ ಹೋಗು ನೋಡಣ" ಸಾಧ್ಯವಾ?

ಅವ ಬೆಳಗಿನ ಸೂರ್ಯನ ಕೆಂಪಿನಲ್ಲಿ ಮುಳುಗಿದ್ದ. ಕಾಫೀ ಕಪ್ಪಿನಾಚೆ ಅವಳು ಇನ್ನೂ ನಿನ್ನೆಯ ಸಿಹಿಗನಸಿನ ಹಿತದಿಂದ ಹೊರ ಬಂದಿರಲಿಲ್ಲ. ಹೊರಗೆ ಮರದ ಕೊಂಬೆ ಕೊಂಬೆ ಮೇಲೆ ಎಲೆ-ಚಿಗುರು ಇಬ್ಬನಿ ಹೊದ್ದು ಮಲಗಿದ್ದವು. ಅವನ ಕಣ್ಣಲ್ಲಿನ ಆಕಾಶದ ಹರವಿನಲ್ಲಿ ತನ್ನ ಬಿಂಬವನ್ನು ಹುಡುಕುತ್ತಾ, ನಿನ್ನೊಂದಿಗೆ ಬೆಟ್ಟ ಕಾಡು ಸುತ್ತಬೇಕೆಂಬ ಆಸೆ. ಸುತ್ತಿಸ್ತೀಯಾ? ನಾನು ಈ ಜನ್ಮದಲ್ಲೇ ಕಾಡು ಕಂಡಿಲ್ಲ. ದೂರದಿಂದ ನೋಡಿದ್ದೇನೆ ಹತ್ತಿರದಿಂದಾ ಇಲ್ಲ. ಅವನು ಜೊತೆಗಿದ್ದರೇ ಹೀಗೆ ಕನಸುಗಳೇ ಕನಸುಗಳು. ಬಿಟ್ಟಿ ಕನಸುಗಳಿಗೇನು ಹಂಗಿದೆಯಾ?

ನಾನು ಹತ್ತಿರವಿಲ್ಲವಾ? ನನಗಿಂತಾ ಕಾಡು ಇಷ್ಟವಾ. ಉತ್ತರ ಅವಳಲ್ಲಿರಲಿಲ್ಲ. ತುಂಟ ನಗು. ಆ ನಗುವಿನ ಅರ್ಥ ಅವನಿಗೆ ಮಾತ್ರ ಅರ್ಥವಾಗೋದು.

ಕಾಡಲ್ಲೇನಿದೇ ಮಜಾ. ಎಲ್ಲಾದ್ರೂ ಸಮುದ್ರವಿರೋ ಜಾಗಕ್ಕೆ ಹೋಗೋಣ.ಚೆಂದದ ಊರಿಗೆ ಹೋಗೋಣ. ಬ್ಯಾಂಕಾಕ್ ಹೋಗೋಣ್ವಾ? ಈ ಜನ್ಮದಲ್ಲಿ ಒಮ್ಮೆಯಾದರೂ ಹೋಗೋಣ ಜತೆಯಾಗಿ. ಪಾಸ್ಪೋರ್ಟ್ ಎಲ್ಲ ರೆಡಿಮಾಡ್ಕೋಬೇಕು. ಏಯ್, ನೆನಪಿಸ್ತಾ ಇರು ನಂಗೆ. ಇಬ್ಬರ ನಡುವೆ ಇಂಥ ಎಷ್ಟೋ ಕನಸುಗಳು ರಂಗೋಲಿ ಇಟ್ಟಿವೆ.

ನೀನು ಸಮುದ್ರದ ತೆರೆಯಂತೆ ಕಣೋ, ಜೋರಾಗಿ ಭೋರ್ಗೆರೆದು, ದಡಕ್ಕೆ ಅಪ್ಪಳಿಸಿ, ಉರುಳಿಸಿ,ಬೀಳಿಸಿ ಕೊನೆಗೆ ಇಲ್ಲದಂತಾಗುವ ನೊರೆಯಾಗಿ ಬಿಡುತ್ತೇನೆ ನಾನು.

ಥೂ ಕಂತ್ರೀ....ಅವನು ಹಾಗೆನ್ನುವಾಗೆಲ್ಲ ತನ್ನೊಳಗೆ ಚಿಟ್ಟೆಯೊಂದು ಪಟ ಪಟ ಪಕ್ಕ ಬಡಿದು ಹಾರಿದಂತ ಪುಳಕ. ಹಾಗನ್ನುವ ಅವ ತುಂಬಾ ಇಷ್ಟವಾಗ್ತಾನೆ.

2. ನಿಂಗೆ ಗೊತ್ತಾ? ಹೀಗೆ ಚಿಕ್ಕವಳಿದ್ದಾಗ ಚಿಕ್ಕಮ್ಮ ಚಿಕ್ಕಪ್ಪನ ಊರಿಗೆ ಹೋದಾಗ ಅಲ್ಲೇ ಹತ್ತಿರದ ಹಟ್ಟಿಹೊಳೆ ಜಾತ್ರೆಗೆ ಹೋಗಿದ್ದೆ. ಹೊಳೆಯಲ್ಲಿ ಈಜುವ, ಈಜು ಬಾರದಿದ್ದರೂ ಆಷ್ಟೇನೂ ಆಳವಿಲ್ಲದ ಕನ್ನಡಿಯಂತೆ ಹೊಳೆಯುವ ನೀರನ್ನು ತುಂಬಿಕೊಂಡ ಹೊಳೆಯಲ್ಲಿ ಬಿದ್ದು ಬಿದ್ದು ಹೊರಳಾಡಿ ನಲಿಯುವ ಮಕ್ಕಳು, ಅವರನ್ನು ಕೂಗಿ ಕರೆದು ಊಟ ತಿಂಡಿ ಕೊಡುವ ಅಮ್ಮಂದಿರು. ಊರಜನ ತಮ್ಮ ತಮ್ಮ ಚಕ್ಕಡಿಗಾಡಿಗಳನ್ನು ಕಟ್ಟಿಕೊಂಡು ಜಾತ್ರೆಗೆ ಬರುತ್ತಲೇ ಇದ್ದರು. ಅಲ್ಲಲ್ಲಿ ಬೆಂಡು-ಬತ್ತಾಸ, ಚುರುಮರೀ ಸೇವು, ಮೆಣಸಿನಕಾಯಿ ಬೋಂಡಾ ಮಾರೋರು, ಆಟಿಗೆ ಸಾಮಾನು, ಬಳೆ, ಪೀಪಿ, ಬಲೂನು ಮಾರುವವರು, ದೊಂಬ್ರಾಟ, ಮಂಗನಾಟ ತೋರಿಸುವವರು ಹೀಗೆ ಗೌಜೋ ಗೌಜಿ. ಗೊತ್ತಾ ನಿನಗೆ ನಾನು ಆ ಜಾತ್ರೆಯಲ್ಲಿ ಸತ್ತೇ ಹೋಗ್ತಿದ್ದೆ. ಹೊಳೆ ಮುಂದೆ ಹರಿಯುತ್ತಾ ಹರಿಯುತ್ತ ಅಲ್ಲೇ ಹತ್ತಿರದ ಘಟಪ್ರಭೆಯಲ್ಲಿ ಒಂದಾಗುವ ಸಂಗಮವಿದೆಯಲ್ಲ, ಅಲ್ಲೇ ಒಂದು ದೊಡ್ಡ ಸುಳಿ. ನಾನು ಕುಡಿಯಲಿಕ್ಕೇ ನೀರು ಹಿಡಿಯಲು ಹೋಗುವುದಕ್ಕೂ ನೀರಿನ ತಂಬಿಗೆ ನೀರಿನ ರಭಸಕ್ಕೆ ಕೈಯಿಂದ ಕೊಸರಿಕೊಂಡು ಸುಳಿಗೆ ಬಿದ್ದೇ ಬಿಟ್ಟಿತು. ನಾನು ಅದನ್ನು ಇಳಿದು ಎತ್ತಿಕೊಳ್ಳುವವಳಂತೆ ಕಾಲು ನೀರಲ್ಲಿ ಇಳಿಬಿಡುತ್ತಿದ್ದೆ......ಅಷ್ಟರಲ್ಲಿ ಅಗಸರವಳು "ಆ ಹುಡುಗಿನ್ನ ಎಳೀರೋ ...ಸುಳಿ ಐತಿ ಎಂತ ಕಿರುಚಿ’ ನನ್ನ ಬದುಕಿಸಿದ್ದಳು. ಈಗ ನೆನೆಸಿಕೊಂಡರೆ ಅಬ್ಬಾ ಬೆವರು ಕಿತ್ತು ಬರುತ್ತೆ ಭಯದಲ್ಲಿ. ಅವಳು ಹೊಳೆಯ ಗುಂಗಿನಲ್ಲಿ, ಅವನು ಹೊಳೆಯ ಆಳದ ಗುಂಗಿನಲ್ಲಿ ಮೈ ಮರೆತಿದ್ದ.

ಅವಳ ಮುಂಗುರುಳಲ್ಲಿ ಸಂಜೆ ಇಳಿಯುತ್ತಿತ್ತು, ಕೆನ್ನೆಗೆ ಬಂಗಾರ ವರ್ಣದ ಹೊಳಪು, ಇದ್ದಕ್ಕಿದ್ದಂತೆ ಅವಳನ್ನು ವಿಸ್ಕಿಯದೇ ಒಂದು ಹೊಳೆಯಲ್ಲಿ ಅದ್ದಿ ಅದ್ದಿ ತೆಗೆಯಬೇಕು, ಇಂಚು ಇಂಚಾಗಿ ಹೀರಬೇಕೆನ್ನುವ ತುಂಟ ಆಸೆ. ಮತ್ತೆ ಹೊಳೆ ನೆನಪು. ನಮ್ಮೂರಲ್ಲೂ ಹಟ್ಟಿಹೊಳೆಯಿದೆ.

ಗೊತ್ತು.........

ಏನು ಹೊಳೆ ಸೆಳವು ಅಂತೀ, ಏನು ವೈಯ್ಯಾರ, ಏನು ಚೆಲುವು, ಬರೀ ಮೋಹವುಕ್ಕಿಸುವ ಮಾಯದಾಟ. ಎಂಥಾ ಮಜಾ ಅಂತೀ, ನನಗೇನೂ ಅರಿವಿಗೆ ತಾಕಲೇ ಇಲ್ಲ, ಹೊಳೆಯಾಳ ಹೆಚ್ಚಿರಬಹುದು ಅಥವಾ ನನ್ನ ಈಜಿನ ಶಕ್ತಿ, ಸಾಮರ್ಥ್ಯ ಕಡಿಮೆಯಾಗಿರಬಹುದು. ಅವಳ ಮುಸಿ ಮುಸಿ ನಗು ಕೆನ್ನೆಯಲ್ಲಿ ಗುಳಿ ಬೀಳಿಸಿ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಚೂಪುನೋಟ ಅವನನ್ನು ಕೆಣಕುತ್ತಿತ್ತು.ನಾ ಚಿಕ್ಕವಳಿರೋವಾಗ ಕಂಡ ಹೊಳೆಯಲ್ಲೀಗ ನೀರು ಕಡಿಮೆಯಾಗಿರಬುಹುದು. ಅಲ್ಲವಾ?

ಆಗಿರಲಿಕ್ಕಿಲ್ಲ, ಆಗುವುದುಲ್ಲ....ಆಗಲಿಕ್ಕೆ ಸಾಧ್ಯವೇ ಇಲ್ಲ. ನಾನಿರೋವರೆಗೂ ....

ಥೂ ಕಂತ್ರಿ........ಅವಳು ಹೊಟ್ಟೆ ಹಿಡಿದು ನಗತೊಡಗಿದಳು..ಮರಿ ಹಕ್ಕಿಯಂತೆ ಅವನೆದೆ ಗೂಡಲ್ಲಿ ಮುಖ ಮುಚ್ಚಿಕೊಂಡು.

3. ಅವನನ್ನು ಕರೆದುಕೊಂಡು ನೆಕ್ಕುಂದಿಗೆ ಹೋಗಬಾರದಿತ್ತೇನೋ. ನಾವಿಬ್ಬರೂ ಬೈಕ್ನಲ್ಲಿ ಬರೋದನ್ನ ತಂಗಿ ಮೈದುನ ದಯಾನಂದ ನೋಡಿಬಿಟ್ಟಿದ್ದ. ಆತ ಬಸ್ಸಿಗಾಗಿ ಕಾಯುತ್ತಿದ್ದ, ನಮ್ಮ ಬೈಕ್ ಅವನ ಮುಂದೆಯೇ ದಾಟಿಕೊಂಡು ಹೋಯಿತು. ಏನಂದುಕೊಳ್ಳುತ್ತಾನೋ. ಯಾಕೋ ಭಯವೇ ಅನಿಸಲಿಲ್ಲ. ಅದೇ ಮಹಂತ ಚೆನ್ನಾಗಿ ಬೈದು ಈ-ಮೇಲಿಸಿದ. ನೀನು ಹೇಗಾಗಿಬಿಟ್ಟಿದ್ದಿ ಗೊತ್ತಾ? ಇಷ್ಟೊಂದು self centered ಆಗಬೇಡಾ. ಬರೀ ಅವನೊಬ್ಬನೇಯಾ ಬದುಕೆಂದರೆ ? ನಿನ್ನ ಸುತ್ತಲೂ ಗೋಡೆ ಕಟ್ಟಿಕೊಳ್ಳುತ್ತಿದ್ದಿ. ಕೊನೆಗೆ ಯಾರೂ ನಿನ್ನವರೆನ್ನುವರಿರುವುದಿಲ್ಲ. ಸ್ವಲ್ಪ ಆಚೆ ಈಚೆ ಕಣ್ಣಾಡಿಸಿ ನೋಡು. ಬದುಕು ಬಳುವಳಿಯಾಗಿ ನೀಡಿದ ಒಳ್ಳೆ ಸ್ನೇಹಿತರಿದ್ದಾರೆ, ಎಲ್ಲರಲ್ಲೂ ಸ್ನೇಹದಿಂದ ಬೆರೆಯುವ ನಿನ್ನ ಒಂದು image ಮತ್ತು identity ಇದೆಯಲ್ಲ, ಅದನ್ನು ಕಳೆದುಕೊಳ್ಳ್ತಾ ಇದ್ದೀಯ.ಸ್ನೇಹ ಸಂಬಂಧವಿದೆಯಲ್ಲ ಅದುಅಮೂಲ್ಯವಾದುದು.ಎಷ್ಟೋ ಸಂಕಟದಲ್ಲಿ ಸಹಾಯಮಾಡಿದವರಿರಬಹುದು. ಅವರನ್ನೂ ಆಗಾಗ ನೆನೆ. ಬರೀ ಅವನೇಯಾ ನಿನಗೆ? ಒಂದು ಫೋನ್ ಇಲ್ಲ, ಈಮೇಲಿಲ್ಲ. ನಾನು ಭೇಟ್ಟಿಯಾಗಲಿ ಬಿಡಲಿ, ನೀನು ಹೇಳಬಹುದಿತ್ತಲ್ಲ ನಿನ್ನ ಬರುವಿಕೆಯ ಬಗ್ಗೆ. ಮಹಂತ ಹೇಳಿದುದರಲ್ಲಿ ಯಾವುದೂ ತಪ್ಪಿಲ್ಲ. ನನ್ಗೇನೂ ಬೇಜಾರಿಲ್ಲ. ಒಬ್ಬರು ಇನ್ನೊಬ್ಬರನ್ನು ಹೀಗೆ ಅರ್ಥ ಮಾಡಿಕೋ ಬೇಕು ಅಂತೇನಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು. ನನ್ಗೇನೋ ಹಾಗೆ ಕಾಣ್ತಿಲ್ಲ.

4. ಎರಡು ದಶಕಗಳ ಮೇಲೇ ಬದುಕು ಸವೆದು ಹೋಯಿತು. ಹೊಸ ಉಲ್ಲಾಸ ಮೂಡಿಸಿದ್ದು, ವಸಂತಾಗಮನವಾದುದ್ದು ಅವನಿಂದಲೆ ಅಲ್ಲವೇ ? ಕೆಲವರಿಗೆ ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಲಿಕ್ಕಾಗುವುದಿಲ್ಲ. ಇನ್ನು ಅವ್ವನಿಗೇನು ಗೊತ್ತು, ಅವಳು ಹೇಗೆ ಬದುಕಿ ಬಾಳಿದಳೆಂದು, ಹೇಗೆ ಕಣ್ಣಿರು ನುಂಗಿ, ತಮಗೆಲ್ಲ ಚೆನ್ನಾಗಿದ್ದೇನೆಂದು ತೋರಿಸುತ್ತಲೇ ಹೋದಳೆಂದು. ಅಂಗೈಯಲ್ಲಿಟ್ಟು ಬೆಳೆಸಿ ತನ್ನ ಕರಳು ಬಳ್ಳಿ ಬಳ್ಳಿಯೆಂದು ತನ್ನನ್ನು ಬಲಿಪಶುಮಾಡಿದವಳು ಅವಳೇ ಅಲ್ಲವೇ ? ಯೋಚಿಸಿದರೆ ತಲೆ ಸಿಡಿದು ಹೋದಂತಾಗುತ್ತದೆ.

5. ಹೀಗೆ ಬರುವ ಹೋಗುವ ನಡುವೆ ಬದುಕು ಸಾಗುತ್ತಿರಲಿ ಬಿಡು. ಈ ಜೀವನವೂ ಅಮೂಲ್ಯವಾದುದು. ಮತ್ತೆ ಮತ್ತೆ ಪಡೆಯುವುದಿಲ್ಲ ನಾವು. ಬದುಕಿದರೆ ಇನ್ನೆಂದೂ ಬದುಕಿಯೇ ಇರಲಿಲ್ಲವೆನ್ನುವಂತೆ ಬದುಕಬೇಕು. ಹೃದಯದ ಮಾತು ಕೇಳಿ, ಜನರ ಅಭಿಪ್ರಾಯವಲ್ಲ. ನಮ್ಮನ್ನು ನಾವು ವಂಚಿಸಿಕೊಳ್ಳುವುದಿದೆಯಲ್ಲ ಅದರಂಥ ಅಪರಾಧ ಯಾವುದೂ ಇಲ್ಲ.

6. ಅತ್ತೆ ಅನ್ನುತ್ತಿದ್ದರು, ನಿನಗೂ ಬರುವ ಹಠವಿತ್ತಲ್ಲ, ನಮಗೂ ನೋಡುವಾಸೆ. ಜೀವನದಲ್ಲಿ ಮನುಷ್ಯನಿಗೆ ಹಠವಿದ್ದರೆ ಎನೂ ಮಾಡಬಹುದು. ಆಕೆ ದಾರ್ಶನಿಕರಂತೆ ನುಡಿದಿದ್ದರು. ಎಷ್ಟು ಸತ್ಯ. ನನಗೂ ಒಂದು ಪುಟ್ಟ ಕನಸಿತ್ತು. ನನ್ನದಲ್ಲದ ನಿನ್ನ ಅಂಗಳದಲ್ಲೊಂದು ಚುಕ್ಕೆ ಇಟ್ಟು ರಂಗೋಲಿ ಇಡುವ ಆಸೆ. ನಿನ್ನ ಎದೆಯಲ್ಲೊಂದು ಹಣತೆ ಹಚ್ಚಿ ದೀಪವಿಡುವ ಆಸೆ. ನನ್ನ ಕಾಲಡಿಯ ನೆಲವೂ ನನ್ನದಾಗಿರಲಿಲ್ಲ. ನನ್ನವನಲ್ಲದ ನಿನ್ನನ್ನೂ, ನನ್ನವನನ್ನಾಗಿಸಿದ ಕನಸನ್ನೂ ಈ ಕಣ್ಣೊಳಗೆ ಹೊತ್ತಿಸಿಕೊಂಡು ಬದುಕುವ ಕನಸು ಇನ್ನೂ ಚೆನ್ನ.

ಕನಸಿನೊಳಗೊಂದು ಕನಸು, ಮನಸಿನೊಳಗೊಂದು ಪಿಸುನುಡಿಯಾಗಿ, ನಿಟ್ಟುಸಿರಾಗಿ, ಹಂಬಲಿಕೆಯಾಗಿ, ನೀನೆ ಇರುತ್ತಿ ಸದಾ ನನ್ನದೇ ನೆರಳಿನಲಿ.

ನಿನ್ನವಳೇ

ಚಿನ್ನು




ಅಂತರ್ಮನದಲ್ಲರಳಿದ ಗುಲಾಬಿ


Thursday, April 10, 2008

ಮೆಲುಕಾಡುವ ಶೂನ್ಯ

ಏನೂ ಮಾಡಲು ತೋಚದೇ, ಮನಸ್ಸಿಗೆ ಯಾವ ಹದವೂ ಸಿಗದೇ, ಬುದ್ಧಿಗೂ ತಾಕದೇ ಬರೀ ಶೂನ್ಯದಲ್ಲಿ ಕಳೆದುಹೋಗುವ ಒಂದು ಕ್ರಿಯೆಯಿದೆಯಲ್ಲ, ಅದು ತಾಕಲಾಟದ್ದು. ನಮಗರಿವಿಲ್ಲದ ಶೂನ್ಯದಲ್ಲೇ ನಾವು ಮೆಲುಕಾಡುತ್ತಿರುತ್ತೇವೆ ಸುಮ್ಮನೇ. ಹಾಗೇ ಇದ್ದುಬಿಡೋಣ ಎಂದರೂ ಏನಾದರೂ ಸಂಭವಿಸಬೇಕು, ಏನೋ ಆಗಲಿದೆ ಸಧ್ಯಕ್ಕೆ ಎನ್ನುವ ಅನ್ನುವ ಯೋಚನೆಯಿದೆಯಲ್ಲ ಅದು ಕಾಯುವಿಕೆ ಹಚ್ಚುತ್ತದೆ. ಸರೀ ಕಾಯುತ್ತ ಕೂರುವ ಕ್ರಿಯೆಯೂ ಬೇಡದ್ದು. ಈ ಚಡಪಡಿಕೆಯೇ ವಿಚಿತ್ರವೆಂದುಕೊಳ್ಳುತ್ತಿರುವಾಗಲೇ ನೆನಪಾಯಿತು ನನ್ನ ಬಾಲ್ಯದ ಗೆಳೆಯನೊಬ್ಬ ತಿಂಗಳ ಹಿಂದೆ ಆರನೇ ತರಗತಿಯ ಹಿಂದಿ, ನಾನ್ ಡಿಟೇಲ್ N.C.E.R.T. ಯ ಪಠ್ಯಪುಸ್ತಕವೊಂದು ಊರಲ್ಲಿ ಸಿಗ್ತಾ ಇಲ್ಲ,ದೆಹಲಿಯಲ್ಲಿ NCERT ಗೆ ಹೋಗಿ ವಿಚಾರಿಸು, ಅಲ್ಲಿ ಖಂಡಿತ ದೊರೆಯುತ್ತವ. ಸಿಕ್ಕರೆ ಒಂದಷ್ಟು ಕೊಂಡು ಕೋರಿಯರ್ ಮಾಡು ಅಂದಿದ್ದ. ಆದ್ರೆ ನನಗೆ ಅರಬಿಂದೋ ಮಾರ್ಗನಲ್ಲಿರುವ NCERT ಆಫೀಸಿಗೆ ಹೋಗಿ ಅವನ ಕೆಲಸ ಮಾಡುವುದಾಗಲಿಲ್ಲ. ಶಾಲೆಯ ಮಕ್ಕಳಿಗೆ ಒಂದು ಪುಟ್ಟ ಸಹಾಯ ಮಾಡುವ ಅವಕಾಶವನ್ನೂ ನಾನು ಕಳೆದುಕೊಂಡೆ ಎನಿಸಿ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಏನು ಮಾಡೋದು ಈ ಊರೇ ಹಾಗೆ. ಈ ಊರೊಂದೆ ಯಾಕೆ ಎಲ್ಲಾ ಮಹಾನಗರಗಳೂ ಹಾಗೇನೆ. ಬೆಳಿಗ್ಗೆ ಎದ್ದರೆ ಗಡಿಬಿಡಿಯಲ್ಲಿ ಆಡುಗೆ ಕೆಲಸ ಮುಗಿಸಿ, ಡಬ್ಬಕ್ಕೆ ತುಂಬಿಸಿಕೊಂಡು. ಮನೆಯವರದ್ದೆಲ್ಲಾ ಡಬ್ಬ ಪ್ಯಾಕ್ ಮಾಡಿ, ಬಸ್ಸಿಗೆ ಓಡಿ, ನೋಯ್ಡಾ ದಿಂದ ಗ್ರೇಟರ್ ಕೈಲಾಶ್ ತಲುಪುವುದರಲ್ಲೇ ಸಾಕೋ ಬೇಕಾಗಿರುತ್ತೆ. ಆಫೀಸಿನಲ್ಲಿ ಗಾಣದೆತ್ತಿನಂತೆ ದುಡಿದು ಸಂಜೆ ಮತ್ತೆ ಸತ್ತೆನೋ ಕೆಟ್ಟೆನೋ ಎಂಡು ಬಸ್ಸಿಗಾಗಿ ಓಡುವ ಗೋಳು. ಇವೆಲ್ಲವನ್ನೂ ನಾವು ನಮ್ಮಿಷ್ಟದಂತೆ ಮಾಡುತ್ತೇವಾ? ಮಾಡಬೇಕು ಅನಿವಾರ್ಯ, ಬದುಕುವುದಕ್ಕಾಗಿ ಇವೆಲ್ಲವನ್ನೂ ನಾವು ಯಂತ್ರದಂತೆ ತಿರುಗುತ್ತಾ ಸವೆಯುತ್ತಾ ಹೋಗುತ್ತಿರುತ್ತೇವೆ. ನಿಲ್ಲಲು ಪುರುಸೊತ್ತಿಲ್ಲದೇ. ಇನ್ನು ಇತರ ಕೆಲಸಗಳನ್ನು ಅದೂ ಸುತ್ತಾಡುವ- ಹುಡುಕುವ ಕೆಲಸವೆಂದರೆ ಬೇಡವೆನಿಸುತ್ತದೆ. ಹೀಗಾಗಿ ಪುಸ್ತಕಕ್ಕಾಗಿ ನನಗೆ ಓಡಾಡಲು, ಶ್ರಮಪಡಲು ಆಗಲೇ ಇಲ್ಲ. ಆಗಲಿಲ್ಲ ಎನ್ನುವುದಕ್ಕಿಂತ ನಾನೇ ಹೆಚ್ಚು ಒತ್ತು ಕೊಟ್ಟು ಮನಸ್ಸಿನಿಂದ ಮಾಡಲು ಪ್ರಯತ್ನಿಸಲಿಲ್ಲವೆನ್ನಬಹುದು. ಈಗ ಹೀಗೆ ಸುಮ್ಮನೇ ಶೂನ್ಯತೆಯಲ್ಲಿ ಮೆಲಕಾಡುವಾಗ ಈ ಗಿಲ್ಟು ಕಾಡತೊಡಗಿ ಕಸಿವಿಸಿ ಹೆಚ್ಚಾಗತೊಡಗಿತು. ಪಾಪ ಅವನು ಏನು ತಿಳಿದುಕೊಂಡನೋ ಎನೋ? ಮಕ್ಕಳ ಪರೀಕ್ಷೆಯ ಕಾಲ ಬೇರೆ. ಮನಸ್ಸು ತಡೆಯದೇ ಫೋನಾಯಿಸಿದೆ. ಆಗ ಮಾತನಾಡಲಾಗಲಿಲ್ಲ. ಕೊನೆಗೆ ಅವನೇ ಫೋನಾಯಿಸಿದಾಗ ನನ್ನ ಅಪರಾಧೀ ಭಾವನೆಗಳನ್ನೆಲ್ಲಾ ಅವನ ಮುಂದೆ ತೋಡಿಕೊಂಡು ಕ್ಷಮೆ ಬೇಡಿದೆ. ಅಯ್ಯೋ ಇರಲಿ ಬಿಡು, ಕೊನೆಗೂ ಆ ಪುಸ್ತಕಗಳು ಸಿಗಲಿಲ್ಲ. ಬೇರೆ ಎರ್ಪಾಟು ಮಾಡಲಾಯಿತು. ನೀನೇನೂ ಬೇಸರ ಪಡಬೇಡಾ ಎಂದು ಸಮಾಧಾನಿಸಿದ.
ಇದೇ ಕಸಿವಿಸಿಯನ್ನು ಎದೆಯಲ್ಲಿ ಬಚ್ಚಿಟುಕೊಂಡೇ ಊರಿಗೆ ಹೋದೆ, ಊರಿಗೆ ಬಂದರೆ ಹೇಳು ಮಾರಾಯ್ತಿ, ನಾನೇ ಅಂಕೋಲಾದಿಂದ ಬಂದು ಭೆಟ್ಟಿಯಾಗ್ತಿನಿ, ಎಷ್ಟೊಂದು ವರುಷಗಳಾದವು ನಿನ್ನ ನೋಡಿ. ಎಂದಿದ್ದ ಅವನ ಮಾತುಗಳು ನೆನಪಿದ್ದರೂ ಕೂಡ ಒಂದು ಬರಿಯೂ ಅವನಿಗೆ ಪೋನಾಯಿಸಲಿಲ್ಲ, ನಾ ಬಂದ ಸುಳಿವೂ ಕೊಡಲಿಲ್ಲ.ಅದೇ ಸಮಯಕ್ಕೆ ಊರಲ್ಲಿ ನಡೆದ ಮುನೇಶ್ವರನ ಗುಡಿ ಜಾತ್ರೆಗೂ ನನ್ನ ಮೌನಕ್ಕೂ , ತಲೆಮರೆಸಿಕೊಳ್ಳುವುದಕ್ಕೂ ಸೇರಿಸಿ ಥಳಕು ಹಾಕಿಬಿಟ್ಟೆ.
ಏಯ್..ಬಾರೋ ನಾನು ಊರಲ್ಲಿದ್ದೇನೆ, ನಿನ್ನ ನೋಡ್ಬೇಕು ಅನಿಸಿದೆ, ಬಂದು ಹೋಗು ಒಮ್ಮೆ’ ಎಂದು ಬಾಲ್ಯ ಸಹಜ ಸಲುಗೆಯಿಂದ ಕೂಡ ಹೇಳಲಾರದೇ, ಬಂದು ಹೋಗಿದ್ದು ಕೂಡ ಸುಳಿವು ಸಿಗದಂತೆ, ಗಾಳಿಯಂತೆ ಹೋಗಿ, ಗಾಳಿಯಂತೆ ಹಾರಿ ಬಂದಿದ್ದೆ ಮತ್ತೆ ದೆಹಲಿಗೆ.
ಈಗ ಅದ್ನ್ನೇ ನೆನ್ಸಿಕೊಂಡು ಥೂ ದರಿದ್ರದ ಮನಸ್ಸಿದು ಎನ್ಸಿ ಬೈದುಕೊಳ್ತಾ ಇದ್ದಿನಿ. ಎನಾದ್ರೂ ಹರ ಸಾಹಸ ಮಾಡಿಯಾದ್ರೂ ಅವನೋದಿಸುವ ಶಾಲೆ ಮಕ್ಕಳಿಗಾಗಿ ಪುಸ್ತಕಗಳನ್ನು ಖರೀದಿಸಿ ಕಳಿಸಬಹುದಿತ್ತು. ಆಗಿದ್ದು ಆಯಿತು ಇನ್ನೂ ಮುಂದಾದರೂ ಹೀಗೆ ಶೂನ್ಯದಲ್ಲಿ ತಡಕಾಡುವ ಬದಲು, ಬಂದ ಅವಕಾಶ, ಆಶಯಕ್ಕೆ ಅನುಗುಣವಾಗಿ ಇನ್ನೊಬ್ಬರಿಗಾಗಿ ತುಸುವಾದರೂ ಶ್ರಮಪಡುವ ಮನೋಬಲ, ಧಾವಂತದ ನಡುವೆಯೂ ಎಲೆಯ ಮರೆಯಂತೆ ಮರೆಯಾದ,ಸೆಲೆಯಂತೆ ಆಗಾಗ ಎದೆಗೆ ಚಿಮ್ಮುವ ಹೊಮ್ಮಿ ಮುದನೀಡುವ ಸ್ನೇಹವನ್ನು ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಹುನ್ನಾರನ್ನು ತುಸುವಾದರೂ ಮೈಗೂಡಿಸಿಕೊಳ್ಳಬೇಕೆಂದು ನಿರ್ಧರಿಸಿದೆ.
ಇನ್ನೊಮ್ಮೆ ಊರಿಗೆ ಬಂದರೆ ಖಂಡಿತ ನಿನಗೆ ತಿಳಿಸಿ ಬರುವೆ. ನೆನಪಾದಾಗ, ಸಮಯ ಸಿಕ್ಕಾಗ ಮಾತಾಡ್ತಾ ಇರೋಣ.
ಸ್ನೇಹದಿಂದ.....

Tuesday, April 8, 2008

ನಿನ್ನ ನೆನಪನ್ನು ಹೊತ್ತು ಬರುವ ಇಬ್ಬನಿ ನೀಲಿ


’ ಆರಾದರೇನವರ ಒಳ ಬಾಳು ಬೇರಿಹುದು

ಒರೆ ಬೇರೆ ಒಳ ಬಾಳು ಬೇರೆ

ಜೋಡಾಗಿ ಸೇರಿದರೆ ಒಂದಾಗಿ ತೋರುವುದು

ಅದರಂತೆ ಬಾಳುವೆಯ ಮೋರೆ !

ಕಡೆಂಗೋಡ್ಲು ಶಂಕರಭಟ್ಟರು

ಅನುಭವವು ಸವಿಯಲ್ಲ ; ಅದರ ನೆನಪೇ ಸವಿಯು. ಅದ ಕದ್ದು ಮೇಯದೇ ಮನವು ?

ಅವನೊಂದಿಗೆ "ಫ್ಯಾಮಿಲಿ ಗಾರ್ಡನ್" ಬಾರ್ ಅಂಡ್ ರೆಸ್ಟ್ಯೂರಾಂಟ್ನಲ್ಲಿ ತಮ್ಮಿಬ್ಬರ ಉಸಿರು ಉಸಿರಿಗೆ ತಾಗುವಂತೆ, ಕಣ್ಣು ಕಣ್ಣಲಿ ಪಿಸುಗುಡುವಂತೆ ಕುಳಿತು, ಅವನೇ ಆರಿಸಿ, ಅವಳಿಗಾಗಿ ಪ್ರೀತಿಯಿಂದ ಆರ್ಡರ್ ಮಾಡಿದ ಜಮೈಕಾವನ್ನು ಅವನೆದೆ ತುಂಬಿ ಉಕ್ಕಿ ಉಕ್ಕಿ ಹರಿಯುವ ಪ್ರೀತಿಯಂತೆ ಈ ಬಾಳ ಬಟ್ಟಲನ್ನು ತುಂಬಿದ ಪ್ರೀತಿಯನ್ನು ಹೀರುತ್ತಾ ನಿಧಾನವಾಗಿ, ಅದರಲ್ಲಿ ಲೀನವಾಗಿ, ಅನನ್ಯತೆಯಿಂದ ಅದರ ರಸವನ್ನು ಆಸ್ವಾದಿಸುತ್ತಾ, ತನ್ನ -ಅವನ ಈ ಜನುಮದ ಪ್ರೇಮದ ಪಯಣ ಬೇಗ ಮುಗಿಯದಂತೆ ಹೇ! ದೇವರೆ, ನಮ್ಮನ್ನು ಜತೆಯಾಗಿಟ್ಟಿರು ಎಂದು ಬೇಡಿಕೊಳ್ಳುತ್ಟಾ, ಸದಾ ಈ ಗುಲಾಬಿ ತುಟಿಗಳ ಅಂಚಿಗೆ ಅವನಿಡುವ ಹೂ ಮುತ್ತು ನವಿರಾಗಿ ತಾಗಿ, ಹಸಿಯಾಗುತ್ತಾ , ಪುಳಕಗೊಳ್ಳುತ್ತಾ, ಅನನ್ಯತೆಯಲಿ ಅವಳ ಒಳಗೆಲ್ಲಾ ಹಸಿ ಹಸಿಯಾಗಿ ಇಳಿಯುತ್ತಾ ಹಾಗೇ ಅವಳ ಕಣ್ಣು ತೇವಗಾಗುತ್ತಿದ್ದವು. ಕಣ್ಣು ತುಂಬಿ ತುಂಬಿ ಈಗಲೋ ಆಗಲೋ ತುಳುಕಲು ಹಾತೊರೆಯುತ್ತಿತ್ತು ಕಂಬನಿಯೊಂದು. ಥೇಟ್ ಅವನ ಸೇರಲು ಹಾತೊರೆಯುವ ತನ್ನಂತೆ !! ಈ ಕ್ಷಣಗಳು ಕಳೆದರೆ ತನ್ನ ಪಾಲಿಗೆ ಮತ್ತೆ ಬರುವುದು ದೀರ್ಘ ಅಗಲಿಕೆ. ಸದಾ ಅವನ ರೂಪವೇ ಕಣ್ಣಲ್ಲಿ, ಕಿವಿಯಲ್ಲಿ ಆತನ ಮಾತುಗಳ ಕಿಣಿಕಿಣಿಸುತ್ತಿರುತ್ತವೇ. ಅವನ ಹಿತವಾದ ಸ್ಪರ್ಶ, ಮಿನುಗುವ ಕಂದು ಕಣ್ಣಿನ ಅಪ್ಯಾಯತೆ,ತನ್ನ ಹಗಲಿರುಳು ಕಾಡುವ ಅವನ ನೋಟ, ಸುರಿಸುವ ಮುತ್ತುಮಳೆ, ಪ್ರೀತಿಯನ್ನುಕ್ಕಿಸುವ ತುಟಿಗಳು,”ನೀನು ಸೌತೆಕಾಯಿ ತಿನ್ನಬೇಡ ಚಿನ್ನಾ, ಗಂಟಲು ನೋವು ನಿನಗೆ’ ಪ್ರೀತಿಯಿಂದಲೆ ಗದರುತ್ತಾ, ಸಲಾಡ್ ತಟ್ಟೆಯನ್ನು ಆಚೆಗೆ ಎತ್ತಿಡುವ ಅವನ ಮಮತೆ, "ಛಳಿಯಾಗ್ತಾ ಇದೆಯಾ?" ತಾವು ಏ.ಸೀ. ಹತ್ತಿರವೇ ಕೂತಿದ್ದಕ್ಕೆ ಅವಳಿಗೆ ಛಳಿಯಾಗುತ್ತಿರಬಹುದೆನ್ನುವ ಅವನ ಕಾಳಜೀ, ಕಕ್ಕುಲತೆ, ಮೋಹ, ಪ್ರೇಮ -ಕಾಮ ಎಲ್ಲವನ್ನೂ ಜಮೈಕಾ ಗ್ಲಾಸಿನಲ್ಲಿ ಕಾಣುತ್ತಾ, ಖಾಲಿ ಖಾಲಿಮ ಮೌನವನ್ನು ತನ್ನೊಳಗೆ ತುಂಬಿಕೊಳ್ಲುತ್ತಾ, ಕನಸಿನಲ್ಲಿ ತೇಲುತ್ತಾ, ನೋವಿನಲ್ಲಿ ನರಳುತ್ತಾ ಒಳಗೊಳಗೇ ಬಿಕ್ಕಳಿಸುತ್ತಾ ಯೋಚಿಸುತ್ತಿದ್ದಳು ಯಾಕೆ ನೆನಪುಗಳು ಸುಂದರವಾಗಿರುತ್ತವೆ ? ಯಾಕೆ ಕಾಡುತ್ತವೆ ? ನೆನಪುಗಳೆ ಹಾಗೇನೋ, ವರ್ತಮಾನಕ್ಕಿಂತ ನೆನಪುಗಳೇ ಸುಂದರ. ಯಾಕೆ ಈ ಕ್ಷಣಗಳು ನೋವನ್ನೂ- ಸುಖವನ್ನೂ ಒಟ್ಟಿಗೇನೀಡುತ್ತವೆ. ಒಮ್ಮೇಲೆ ಕನಸಿನಿಂದ ಎಚ್ಚೆತ್ತ ಭಾವ, ಅವೇ ಕಳೆದ ಸುಂದರ ಕ್ಷಣಗಳು ವಿರಹದ ತಾಪವನ್ನೂ ಅಗಲಿಕೆಯ ನೋವನ್ನೂ ಕೊಡುತ್ತವೆ. ಅವನೆ ನೆನಪೆಂದರೆ ದಿನಕ್ಕೊಮ್ಮೆಯಾದರೂ ಅಳುತ್ತಾಳೆ. ಕಳೆದುಹೋದ ಕ್ಷಣಗಾಳಿಗಾಗಿ ಸಂಕಟಪಡುತ್ತಾಳೆ. ಅವನ ಹಿರಿಮೆ ದೊಡ್ಡದು. ಎಲ್ಲವನ್ನೂ ಅವಳಿಗಾಗಿ ಕೊಟ್ಟಿದ್ದಾನೆ. ತನ್ನದಾದ ಎಲ್ಲವನ್ನೂ ಮತ್ತು ತನ್ನದಲ್ಲದ ಬದುಕಿನಿಂದಲೂ ಆವನು ಬಾಚಿ ಬಾಚಿ ಅವಳ ಮಡಿಲು ತುಂಬಿದ ಪ್ರೀತಿ ನೆನಪು ಒಮ್ಮೆ ತುಟಿಯಂಚಲಿ ನಸು ನಗು ಮೂಡಿಸಿದರೆ, ಇನ್ನೊಮ್ಮೆ ಕಣ್ಣು ಕೊಳಗಳಾಗುತ್ತವೆ. ಅಳು ಒತ್ತರಿಸಿಬರುತ್ತದೆ. ನಿನ್ನ ಬಿಟ್ಟು ಹೇಗೆ ಬದುಕುತ್ತಿದ್ದೇನೆ ಗೊತ್ತಾ? ಬದುಕಬಲ್ಲೇನೆ? ನೀನಿಲ್ಲದ ಬದುಕನ್ನೂ ಹೇಗೆ ಊಹಿಸಲಿ? ನನಗೆ ಬದುಕೆಂದರೆ ನೀನೆ. ನೀನಿಲ್ಲದ ಬದುಕೂ ಒಂದು ಬದುಕಾ? ಬಂದು ಬಿಡು ಒಮ್ಮೆ. ಸದಾ ದೇವರಲ್ಲಿ ಮೊರೆಯಿಡುತ್ತಿರುತ್ತಾಳೆ.”ಅವನ ಸ್ನೇಹ, ಸಾಮಿಪ್ಯ, ಸಾಂಗತ್ಯವನ್ನು ಎಲ್ಲಾ ಜನ್ಮಕ್ಕೂ ನೀಡು’ ಎಂದು.

ಅವನು ಆಗಸದ ಚುಕ್ಕೆಗಳನ್ನು ತಂದು ಕೊಡದಿದ್ದರೂ ಬೆಳದಿಂಗಳ ರಾತ್ರಿ, ಅವಳ ಎದುರು ಕುಳಿತು, ಕಣ್ಣಲ್ಲಿ ಕಣ್ಣಿಟ್ಟು, ತಾನು ಉಣ್ಣುವ ಮೊದಲ ತುತ್ತನ್ನು ಅವಳ ಬಾಯಿಗೆ ಉಣ್ಣಿಸಿದ್ದಾನೆ, ಅಷ್ಟೇ ಪ್ರೀತಿಯಿಂದ ಅವಳುಣಿಸಿದ ಕೈತುತ್ತನ್ನೂ ಪರಮಾನಂದವನ್ನು ಅನುಭವಿಸಿದಂತೆ ಕಣ್ಮುಚ್ಚಿ ಸವಿದಿದ್ದಾನೆ. ಬಾಯಿಂದ ಬಾಯಿಗೆ ಗುಬ್ಬಚ್ಚಿ ಗುಟುಕು ನೀಡಿದಂತೆ ಒಬ್ಬರಿಗೊಬ್ಬರು ಗುಟುಕು ನೀಡಿ ಜೋಡಿಹಕ್ಕಿಗಳಂತೆ ನಲಿದಿದ್ದಾರೆ, ಜಗಳಾಡಿಕೊಂಡರೂ ಮತ್ತೆ ಇನ್ನೆಂದೂ ಜಗಳಾಡುವುದಿಲ್ಲವೆಂದು ತಮ್ಮನ್ನೇ ಬೈದುಕೊಂಡು ಮತ್ತೆ ಒಂದಾಗಿದ್ದಾರೆ.ಏನೆನ್ನಬೇಕು ಈ ಸಂಬಂಧಕ್ಕೆ ? ಯಾಕಿಷ್ಟು ಮೋಹ ಅವನೊಂದಿಗೆ? ಯಾಕಿಂಥ ಪ್ರೇಮ ಅವನ ಮೇಲೆ? ಅರ್ಥವಾಗಿಲ್ಲ ಇನ್ನೂ. ಅವನೆಂದರೆ ತನ್ನ ಬದುಕಿನಲ್ಲಿ ಕನಸು ಮತ್ತು ವಾಸ್ತವದ ಸ್ವರೂಪ.

ಊಟ ಮುಗಿಸಿ ರೂಮಿಗೆ ಬಂದಾಗಲೂ ತಾವು ಹೀಗೆ ಸದಾ ಜೊತೆಯಾಗಿಯೇ ಇದ್ದೇವೇನೋ ಎಂಬಂತೆ ಒಬ್ಬರ ಎದೆ ಮಿಡಿತ ಇನ್ನೊಬ್ಬರು ಆಲಿಸುತ್ತಾ, ಲೆಕ್ಕವಿಲ್ಲದಷ್ಟು ಕನಸುಗಳನ್ನು, ನಾಳೆಗಿಡುವ ಚುಕ್ಕಿಗಳನ್ನು, ಕಡಲಿನಾಳದಿಂದ ಮುತ್ತನ್ನು ಹೆಕ್ಕುತ್ತಾ, ಎಂದೂ ಅಗಲದಂತೆ ತಬ್ಬಿಕೊಳ್ಳುತ್ತಾ ಆಗಾಧ ಸಮುದ್ರದಂತೆ ಭೋರ್ಗರೆಯುತ್ತಿದ್ದ ಪ್ರೇಮಿಗಳು. ಇಬ್ಬರ ಸ್ನೇಹವೂ ಅನನ್ಯವಾದುದು, ಗಾಡವಾದುದು. ಒಬ್ಬರಿಗೊಬ್ಬರು ಸಮರ್ಪಿಸಿಕೊಂಡಾಗಿದೆ, ಒಬ್ಬರಿಗೊಬ್ಬರಲ್ಲಿ ಆಳವಾಗಿ ಇಳಿದುಹೋಗಿದ್ದಾರೆ. ಮನಸು ಮನಸುಗಳು ಬೆರೆತಿವೆ, ದೇಹವೆರಡು ಪ್ರಾಣವೊಂದೇ ಎನ್ನುವಂತೆ. ಒಬ್ಬರ ಮಾತು ಒಬ್ಬರು ಕೇಳುತ್ತಾರೆ ಎರಡಿಲ್ಲದ ಒಮ್ಮತ ಅವರದು. ಅವನು ಹೇಳಿದ್ದು ಅವಳಿಗೆ ಹಿತ, ಅವಳು ತೋರಿದ್ದು ಅವನಿಗೆ ದೇವಿಯ ಆದೇಶ, ದಾರಿ ದೀಪ. ಆತ ಅವಳಿಗೆ ವಿಧೇಯ, ಅವಳು ಅವನಿಗೇ ಮೀಸಲು.

"ಯಾವಾಗ ಬರ್ತೀಯಾ ರಾಜಾ?"

ಆಫೀಸಿಗೆ ಹೋದ ಅವನನ್ನು ಕಾಯುತ್ತಾ, ಬೋರು ಹೊಡೆಯುತ್ತಿದ್ದ ರೂಮಿನಲ್ಲಿ ಏನೂ ಮಾಡದೇ ತೋಚದ ಇವಳು ಕೇಳುತ್ತಿದ್ದಳು.

"ಇರು ಪುಟ್ಟಾss, ಬಂದ್ಬಿಟ್ಟೆ ಇನ್ನೊಂದು ಕಾಲು ಗಂಟೆಯಲ್ಲಿ, ನೀನು ತಯಾರಾಗಿರು ಹೊರಗೆ ಹೋಗೋಣ, ಬರ್ತಾ ಊಟನೂ ಮಾಡ್ಕೊಂಡ್ ಬರೋಣ" ಅವನ ಇಂಪಾದ ದ್ವನಿ ಎದೆಗಿಳಿಯುತ್ತಲೇ ನವಿಲಾಗಿ ಅವಳ ಮನ ಗೆಜ್ಜೆ ಕಟ್ಟಿ ಕುಣಿಯತೊಡಗಿತ್ತು. ಜಿಂಕೆಯಂತೆಹಾರಿ, ತಲೆಬಾಚಿ, ಚೆನ್ನಾಗಿ ಬಿಸಿ ನೀರಿನಲ್ಲಿ ಮುಖತೊಳೆದು, ಬೇರೆ ಡ್ರೆಸ್ ಹಾಕಿ ಕಾಯತೊಡಗಿದ್ದು ಇಂದು ಬರಿ ನೆನಪಾಗಿ ಕಾಡತೊಡಗುತ್ತದೆ. ಎದೆಯಲ್ಲಿ ನೂರು ಶೂಲ ಚುಚ್ಚಿದಂತೆ ಮನ ಮುಳ್ಳಾಗುತ್ತದೆ. ಬರುವ ಇನಿಯನಿಗಾಗಿ ಕಾಯುತ್ತಿರುವುದರಲ್ಲಿ ಎನು ಸುಖವಿದೆ, ಎಂಥಾ ಅಮಲಿದೆ, ಸೊಗಸಿದೆ, ಚೆಲುವಿದೆ, ಮತ್ತೇ ಬಾರವೇ ಆ ಸುದಿನಗಳು ? ಅವನು ಯಾವಾಗ್ಲೂ ಹೇಳ್ತಾನೆ ಇರ್ತಿದ್ದ, "ಸುದಿನಗಳು ನಮಗೆ ಬರ್ತಾವೆ ಇರು, ಕಾಯೋಣ’ ಆದ್ರೆ ಕಾಯೋದು ಎಷ್ಟು ಹಿಂಸೆ ಅಂತಾ ಕಾಯೋರಿಗೆ ಗೊತ್ತು.

ಆಫೀಸಿನಿಂದ ಬರುವ ಅವನನ್ನು ಏದುರುಗೊಳ್ಳುವ ಅವಳ ಕಣ್ಣ ತುಂಬ ಆಗಸದ ನೀಲಿ ನೀಲಿ, ಅವನ ಕಣ್ಣಲ್ಲಿ ಇಣುಕುವ ಮಿನುಗು ನಕ್ಷತ್ರ ನಗೆ. ಒಳಗೆ ಬಂದು ಹಾಸಿಗೆ ಮೇಲೆ ಮೈಚೆಲ್ಲಿದ ಅವನಿಗೆ ’ನೀರು ಕುಡಿ ರಾಜಾ, ಕಾಫಿ ತರಿಸ್ಲಾ? ಎನ್ನುವ ಆಕೆಯ ಎರಡು ಮಾತೇ ಸಾಕು ಆಯಾಸವೆಲ್ಲ ಕಳೆದು ನವ ಉತ್ಸಾಹ ತುಂಬಿಕೊಳ್ಳಲು.

ಬಿಕ್ಕುತ್ತಿತ್ತು ಗತಿಸಿದ ಕ್ಷಣ. ಅವನೊಂದಿಗೆ ಕಳೆದ ಮೂರು ದಿನಗಳು ಗೊತ್ತೇ ಆಗಲಿಲ್ಲ. ನಮ್ಮ ಬದುಕು ಯಾವುದು? ನಾವು ಬಯಸುವ ಬಾಳು ನಮ್ಮದಾಗುವುದಾ? ಜೊತೆಯಾಗಿ ಇಟ್ಟ ಹೆಜ್ಜೆ, ತೋಳಲ್ಲಿ ತೋಳು ಬಳಸಿ ನಡೆದ ನಡೆ, ಹಂಚಿಕೊಂಡ ತುತ್ತು, ಕಾಡಿ-ಬೇಡಿ ಸವಿದ ಸವಿ, ಸರಸ-ವಿರಸ, ಮೋಡವಾಗಿ ಕವಿದು, ಮತ್ತೆ ಮಳೆ ಸುರಿಸಿದ ಅವಳ ಪ್ರೇಮ, ಸಮುದ್ರದಂತೆ ಅವಳ ಮೇಲೆ ಆವರಿಸಿ ಸುರಿದು, ಮುಳುಗಿಸಿ ಎಳಿಸಿದ ಅವನ ಮುತ್ತು ಮಳೆ ಎಲ್ಲ ನೆನಪಾಗಿ ಕಣ್ಣಂಚಿಗೆ ಹನಿ ಮುತ್ತು ಇಣುಕುತ್ತಿರುತ್ತದೆ. ಒಳಗೆಲ್ಲಾ ಮೌನ ತುಂಬಿಕೊಂಡು ಉಸಿರು ಭಾರವಾಗಿ ಕುಳಿತು ಆ ಮೌನದಲ್ಲಿ ಬಿಕ್ಕಳಿಕೆ ಕರಗತೊಡಗುತ್ತದೆ. ಹೊರಗೆ ಬಾರದೇ ಒಳಗೆ ಅದುಮಿಡದ ಸಂಕಟಕ್ಕೇ ಒಳಗೇ ನರಳತೊಡಗುತ್ತಾಳೆ.

ನಿನಗೊಂದಿಷ್ಟು ನೆನಪಿನ ಹೂ ಮುತ್ತುಗಳು. ಎತ್ತಿಕೋ ಮೆಲ್ಲಗೇ.....

ಒಲವಿನಿಂದ ನಿನ್ನವಳು.

ಚಿನ್ನು.

Sunday, April 6, 2008

ಮೂಕ ಹಕ್ಕಿಯು ಹಾಡುತಿದೆ

ಮೂಕ ಹಕ್ಕಿಯು ಹಾಡು, ಮೌನ ರೋಧನ, ಕಣ್ಣು ಕಟ್ಟಿ ಕಾನನದಲ್ಲಿ ಬಿಟ್ಟು ಹಾರು ಎಂದಂತೆ. ಹಾರುವ ವ್ಯಾಪ್ತಿ, ಹರವು ಎಲ್ಲ ಮುರುಟಿಹೋದ ಕನಸುಗಳಾಗಿವೆ. ಕನಸುಗಳೊಳಗೊಂದು ಕನವರಿಕೆ. ಕನವರಿಸುವ ಕನಸು ಗಾವುದ ಗಾವುದ ದೂರ. ನನ್ನ ಧ್ವನಿ ಕೇಳದ ಲೋಕದಲ್ಲಿ ಮನಸಿನ ಮಾತಿಗೆ, ರೋಧಿಸುವ ಹೃದಯಕ್ಕೆ ಸಾಂತ್ವನ ನಿನ್ನ ಎರಡು ಹನಿ ಸವಿಮಾತು. ಪ್ರೀತಿಯ ಗುಟುಕು. ದಿನವೂ ಗುಟುಕುವ ಕಾಳು, ಕಡ್ಡಿ ವಿಷವಾಗಿ, ಒಡಲಲ್ಲೇ ಸಂಕಟ ನುಂಗಿ, ದೈನ್ಯವೇ ಗಂಟಲಲ್ಲಿ ನೋವಾಗಿ ಕುಳಿತು ಅಳುವೇ ತುಟಿಗೆ ಬರುತ್ತದೆ. ಆದರೆ ಕಣ್ಣೀರು ಬತ್ತಿ, ಎದೆ ಹಿಂಗಿ ಹೋದ ಹಾಗೆ ಜೋಡಿ ಹಕ್ಕಿಯ ನೆನಪು ಕಾಡುತ್ತದೆ. ಬೇರಾವುದೋ ದೇಶಕ್ಕೆ ಹೋದ ಜೋಡಿಗಾರ ಹಕ್ಕಿಯ ನೆನೆದು ಹಕ್ಕಿಯ ಮಾತುಕತೆ ಎಲ್ಲ ಮೌನದಲ್ಲಿ, ಮೂಕತೆಯಲ್ಲಿ. ಹಾಡು ಹಾಡುತ್ತಿಲ್ಲ, ಮುಗಿಲು ಮಾತಾಡುತ್ತಿಲ್ಲ, ಮೋಡ ಮುಸುಕಿನಲಿ ಮುಸುಗುಡುತ್ತಿಲ್ಲ, ಗಿಡ ಗಂಟೆಗಳ ಕೊರಳ ಗಾನವೂ ರುಚಿಸುತ್ತಿಲ್ಲ. ಮುಗಿಲ ಬಣ್ಣ, ಮೋಡ, ಮಳೆ. ನವಿಲು ನಾಟ್ಯ, ಎಲ್ಲ ನೀರಸವಾಗಿ ಈ ಹಕ್ಕಿ ಪಿಳಿಪಿಳಿ ಕಣ್ಣು ಬಿಟ್ಟು ಹಕ್ಕಿ ಇನಿಯನ ಆಗಮನದ ಹಾದಿ ಕಾಯುತ್ತಿದೆ. ಒಂಟಿತನ ಇಷ್ಟು ಶಾಪವೇ ? ಅಗಲಿಕೆ ಇಷ್ಟು ಕ್ರೂರಿಯೇ?
ತಾಯಿ ಹಕ್ಕಿ ಮರಿ ಹಕ್ಕಿಗಾಗಿ ದೇವರಲ್ಲಿ ಮೊರೆಯಿಡುತ್ತಿತ್ತು. ಬರುವ ಸುದಿನವನ್ನು ನೆನೆದುಕೊಂಡೇ ಕಾಲ ಕಳೆಯಬೇಕಾಗಿದೆ. ಎಂದು ಬರುವುದು ಆ ಕಾಲ, ನೀ ಹೇಳುವ ಆ ಸುದಿನ ? ಆ ಕನಸು ನನಸಾಗುವ ಸುಮೂಹೂರ್ತ. ? ನನಸಿನಲ್ಲಿ ಆಗದ್ದನ್ನು ಕನಸಿನಲ್ಲಿ ಕಾಣಬೇಕಿದೆ. ಕಂಡು ಸಂತಸಪಡಬೇಕಿದೆ. ಇಷ್ಟೇನಾ ಬದುಕು ?

Friday, April 4, 2008

ಯಾವ ಮೋಹನ ಮುರುಳಿ ಕರೆಯಿತೋ.......

ವಿನಾಕಾರಣ ನಿನ್ನೊಂದಿಗೆ ಮುನಿಸ್ಕೊಂಡು ಮಾತುಬಿಟ್ಟಿದ್ದೆ. ಗೊತ್ತು ನಿನ್ನದೇನೂ ಅಂಥಾ ಮಹಾ ತಪ್ಪಿರಲಿಲ್ಲ ರಾಜಾ. ಮುನಿಸಿಕೊಳ್ಳುವ ಕಾರಣವೂ ಇರಲಿಲ್ಲ. ಆಗಿದ್ದು ಇಷ್ಟೇ ! ನೀನು ಜಯನಗರದ ನಿನ್ನ ಆಫೀಸಿನಿಂದ ದಿನಕ್ಕೊಮ್ಮೆಯಾದರೂ ನಾನುಳಿದುಕೊಂಡ ನನ್ನ ಗೆಳತಿಯ ಮನೆಯಿದ್ದ ವಿಜಯನಗರಕ್ಕೆ ಬರಲಿ, ಬಂದೇ ಬರುತ್ತಿಯೆಂದು ನಿರೀಕ್ಷಿಸಿದ್ದೆ. ಆದರೆ ನಾನಂದುಕೊಂಡಂತೆ ನಿನಗೆ ಬರಲಾಗಿರಲಿಲ್ಲ, ನಿನ್ನವೇ ಆದ ಕೆಲಸದ ಒತ್ತಡಗಳ ನಡುವೆ. ನಾನು ಬೇಸರ, ಮುನಿಸಿನಿಂದಲೇ ತಂಗಿಯ ಮನೆಗೆ, ದೊಡ್ಡನೆಕ್ಕುಂದಿಗೆ ಹೊರಟು ಬಂದಿದ್ದೆ. ನೀನು ಮಾತಾಡಿಸುವ ಪ್ರಯತ್ನ ಪಟ್ಟು, ಕೊನೆಗೆ ಸುಮ್ಮನಾಗಿದ್ದೆ. ನೀನು ನಿನ್ನ ಜಾಗದಲ್ಲಿ ಸರಿಯಿದ್ದೆ, ನಾನು ನನ್ನದೇ ತರ್ಕದಲ್ಲಿ. ಮೊದಮೊದಲು ಸಿಟ್ಟಿನಲ್ಲಿ ಗೊತ್ತಾಗದೇ ಕಳೆದ ದಿನಗಳನ್ನು ಮುಂದೆ ಹಾಗೆ, ನೀನಿಲ್ಲದ ಕ್ಷಣಗಳನ್ನು, ದಿನ ಕಳೆಯುವುದೇ ಕಷ್ಟವಾಗಿ ಹೋಯಿತು. ಕ್ಷಣಗಳು ಯುಗವಾಗಿ ಹಿಂಸಿಸತೊಡಗಿದ್ದವು. ಅಗಲಿಕೆಯ ನೋವು ಕಣ್ಣಿರಾಗಿ ಹರಿಯತೊಡಗಿತ್ತು. ನನ್ನದೇ ಹಠ, ನನ್ನದೇ ಮುನಿಸಿನಲ್ಲಿ ಎಂಥದೋ ದೊಡ್ಡ ಕಾರಣವಿರಬಹುದು ಎಂದೇ ತಿಳಿದಿದ್ದ ನನ್ನ ಭ್ರಮೆ ನೀನು ದೂರವಾಗುತ್ತಲೂ, ಅಲ್ಲ, ನಿನ್ನಿಂದ ನಾನು ದೂರವಾಗುತ್ತಲೇ ಗಾಳಿ ಹೋದ ಬಲೂಲಿನಂತಾಗತೊಡಗಿತ್ತು. ಮನಸ್ಸು ನಿನ್ನನ್ನು ನೆನೆದು ನೆನೆದು ನೋಯುತ್ತಿತ್ತು, ಬೆಂದು ಕರಕಲಾಗತೊಡಗಿತ್ತು. ನೀನಿಲ್ಲದ ಬದುಕು ಇಷ್ಟು ರಸಹೀನವೇ ? ಇದುವರೆಗೆ ಗೊತ್ತಿಲ್ಲದ ಸತ್ಯವೊಂದು ನನ್ನನ್ನು ಇನ್ನಷ್ಟು ನಿನ್ನ ಹತ್ತಿರ ಬರುವಂತೆ ಮಾಡಿತ್ತು. ಆ ನಾಲ್ಕೈದು ದಿನಗಳು ನಾನುಭವಿಸಿದ ನರಕಯಾತನೆಯೇ ಇದಕ್ಕೆ ಸಾಕ್ಷಿ. ನೀನು ಪಟ್ಟ ನೋವು ನಿನ್ನ ಎಸ್.ಎಮ್.ಎಸ್.ನಿಂದ ಗೊತ್ತಾಗುತ್ತಿದ್ದರೂ ನಾನೇ ಸರಿಯೆಂಬ ನನ್ನ ಅಹಂಕಾರ ನಿನ್ನನ್ನು ಕರೆಯುವಂತೆ ಮಾಡಗೊತ್ತಿರಲಿಲ್ಲ. ನನಗೆ ಗೊತ್ತು ನೀನಂಥಾ ಕಟುಕನಲ್ಲ. ನನ್ನ ಒಂದು ಕರೆಗೆ ಕರಗಿಹರಿಯುವ ಸೆಲೆಯಾಗಿಬಿಡುತ್ತಿ. ಮುದ್ದುಗರೆಯುವ ಮೋಡವಾಗಿ ಬಿಡುತ್ತಿ. ನಾನು ನಿನ್ನ ಪ್ರೇಮದ ಬಿಸಿಯಲ್ಲಿ ಮೇಣವಾಗಿ ಕರಗುತ್ತೇನೆ. ನೀನು ನನ್ನನ್ನೂ ನನ್ನ ಅವಿವೇಕವನ್ನೂ ಮನ್ನಿಸಿ, ಮತ್ತೆ ಬಾಚಿಕೊಂಡು ಮುತ್ತಿನ ಮಳೆಗರೆಯುತ್ತಿ. ಮೋಡಗಟ್ಟಿದ ನೋವೆಲ್ಲ ಧಾರಾಕಾರವಾಗಿ ಸುರಿದಾಗಲೇ ಮನಸ್ಸು ಹಗುರವಾಗುವುದು. ಎಂದೆಲ್ಲ ನಾನೇ ನನ್ನ ಯೋಚನೆಯಲ್ಲಿ ಕನಸು ಕಾಣುತ್ತಿದ್ದೇನೆ ಹೊರತು ನಿನ್ನನ್ನು ಹೇಗಿದ್ದೀಯಾ ಅಂತಾ ಕೂಡ ಕೇಳಲು ಧೈರ್ಯಮಾಡಲಿಲ್ಲ ರಾಜಾ. ಆದರೆ ಒಂದು ಕ್ಷಣವೂ ನಿನ್ನನ್ನಗಲಿ ನಾ ಬದುಕಲಿಲ್ಲ, ಉಸಿರಾಡುವ ಶವದಂತಾಗಿದ್ದೆ. ಬದುಕೆಂದರೆ ನೀನು, ನೀನೆಂದರೆ ನನ್ನ ಸುಂದರ ಬದುಕು. ಇದೇ ಸತ್ಯ, ಇದೇ ನಿತ್ಯ.

ಸಹನೆ ಕುಸಿಯತೊಡಗಿತ್ತು,ಮುನಿಸಿನ ಜಾಗವೆಲ್ಲ ಪಶ್ಚಾತ್ತಾಪ ತುಂಬಿಕೊಂಡು ನಿನ್ನನ್ನು ಯಾವಾಗ ನೋಡುವೇನೋ? ಈ ಕಣ್ಣುಗಳು ಎಂದು ನಿನ್ನನ್ನು ಕಣ್ಣತುಂಬ ತುಂಬಿಕೊಂಡು , ಅಲ್ಲೇ ಬಚ್ಚಿಟ್ಟುಕೊಳ್ಳುತಾವೋ ಎನಿಸುವಷ್ಟು ತೀವ್ರವಾದ ವೇದನೆ, ಆಸೆ, ಹಂಬಲ, ನಿನ್ನ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಹರಿಯತೊಡಗಿತ್ತು, ಎದೆಯಲ್ಲಿ ಹಾಗೇ ಹನಿಯತೊಡಗಿತ್ತು. ತಡೆಯಲಾರದೇ ಭಾನುವಾರದಂದು ನಿನ್ನ ಗೆಳೆಯನಿಗೆ ಹೇಳಿದೆ ನಮ್ಮಲ್ಲ ಜಗಳದ ಸುದ್ದಿ, ಆತ ಕೇಳಿ ಸುಮ್ಮನೆ ನಗಾಡಿದ. ಏನು, ನೀವು ಚಿಕ್ಕ ಮಕ್ಕಳಂತೆ ಆಡ್ತೀರಾ. ಬಹುಶಃ ಅವನು ನಿನಗೆ ಹೇಳಿರಬಹುದು,ನಾನು ಕಾಲ್ ಮಾಡಿದ ಬಗ್ಗೆ. ನಿನ್ನಿಂದ ಯಾವ ಕಾಲೂ ಬರಲಿಲ್ಲ. ಇಡೀ ದಿನ ಜಾತಕ ಪಕ್ಷಿಯಂತೆ ಕಾ ದು.. , ಸಂಜೆ ನಾನೇ ನಿನಗೆ ಪೋನಾಯಿಸಿದೆ. ನೊಂದ ಧ್ವನಿಯಲ್ಲಿ. ಬೆಂದ ಮನದಿಂದ ನೋವೇ ಕಣ್ಣೀರಾಗಿ, ಮತ್ತೆ ಮತ್ತೆ ಒಳಗೇ ಬಿಕ್ಕುತ್ತಾ ನಿನ್ನೊಂದಿಗೆ ಮಾತಿಗಿಳಿದಿದ್ದೆ. ನೆನಪಿದೆಯಾ? ಏನೆಲ್ಲ ಮಾತಾಡಿದೆವು? ಯಾವುದೂ ನೆನಪಿಲ್ಲ. ಇಬ್ಬರೂ ಕರಗಿ ನೀರಾಗಿದ್ದೆವು. ಈ ಕ್ಷಣಕ್ಕಾಗಿಯೇ ಹಾತೊರೆಯುತ್ತಿದ್ದೇವು. ಆದರೆ ನೀನು ಕರೆಯ ಕೇಳಿ ಓಡಿ ಬರುವ ಕರುವಿನಂತೆ, ಹಠ ಮರೆತು ಓಡಿ ಬರುವ ಮುದ್ದು ಮಗುವಿನಂತೆ ಬೈಕ್ ಏರಿ ಹೊರಟೇ ಬಿಟ್ಟೆ. ಅಬ್ಬಾ... ನಾಲ್ಕೈದು ದಿನ ಪಟ್ಟ ಸಂಕಟ,ನೋವು, ವನವಾಸ, ಪರಿತಪಿಸಿದ್ದು ಎಲ್ಲ ಕ್ಷಣದಲ್ಲಿ ಮರೆತು ನೀ ಬರುವ ದಾರಿಯನ್ನೇ ಕಾಯತ್ತಿದ್ದೆ.

ಗಾಳಿಯಲ್ಲಿ ಬೈಕ್ ಓಡಿಸಿಕೊಂಡು ಬಂದವನಂತೆ ೧೫-೨೦ ನಿಮಿಷದಲ್ಲಿ ನೀನು ನನ್ನೆದುರಿಗೆ, ಬೈಕ್ ಮೇಲೆ ಹಸಿರು ಜಾಕೆಟ್, ಹೆಲ್ಮೆಟ್ ಹಾಕ್ಕೊಂಡು, ನಿನ್ನ ತೇವದ ಕಣ್ಣುಗಳು ನನ್ನನ್ನು ಅಡಿಯಿಂದ -ಮುಡಿವರೆಗೆ ತೋಯಿಸುತ್ತಿದ್ದವು. ಇನ್ನು ಮುಂದೆ ಹೀಗೆಲ್ಲ ಚಿತ್ರಹಿಂಸೆ ಕೊಡಬೇಡಾ, ನೀನೂ ನರಳಬೇಡ ಎನ್ನುವಂತೆ ಆ ಜೋಡಿ ಕಂಗಳು ಆರ್ದ್ರವಾಗಿ, ಹಿಡಿಯಾಗಿ ನನ್ನ ಕರುಳನ್ನು ಹಿಂಡುತ್ತಿದ್ದವು. ನಾನು ಮರುಮಾತಾಡದೇ ಜತೆಯಲ್ಲಿ ತಂಗಿ ಇದ್ದದ್ದೂ ಮರೆತು ನಾನು ಈಗ ಬರ್ತೀನಿ, ಏ.ಟಿ.ಏಮ್.ಗೆ ಹೋಗ್ಬೇಕು ಎಂದು ನಿನ್ನ ಹಿಂದೆ ಬೈಕ್ ಏರಿ ಕುಳಿತೇ ಬಿಟ್ಟೆ. ಮನೆದಾಟಿ ಮುಂದೆ ಮೇನ್ ರೋಡಿಗೆ ಸೇರುವ ಮೊದಲೇ ನಾನು ಹಿಂದಿನಿಂದ ಗಟ್ಟಿಯಾಗಿ ತಭ್ಬಿಕೊಂಡು ನಿನ್ನ ಬೆನ್ನು ತೋಯಿಸುತ್ತಿದ್ದೆ. ನೀನು ಇಡೀ ದಿನ ಕುಳಿತು, ನೋವ ಮರೆಯಲು ಡ್ರಿಂಕ್ಸ್ ಮಾಡಿದ್ದು ನಿನ್ನ ಹತ್ತಿರಕ್ಕೆ ಬಂದಾಗಲೇ ಗೊತ್ತಾಗಿತ್ತು. ಹೃ‍ದಯವೆ ಒಡೆದು ಹೋಗುವಂತಾ ನೋವು, ನರಳಿಕೆ, ಅಗಲಿಕೆ ಮಿಲನದಲ್ಲಿ ಬಿಕ್ಕುತ್ತಿತ್ತು. ನೀನು ಮೌನವಾಗಿ ಗಾಡಿ ಓಡಿಸುತ್ತಿದ್ದರೂ ನೀನು ಆಗಾಗ ಕಣ್ಣು ಒರೆಸಿಕೊಳ್ಳುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು. ಸಾರೀ ರಾಜಾ....ಕ್ಷಮಿಸಿಬಿಡು ಇನ್ನೆಂದು ಹೇಗೆ ಹುಚ್ಚಿ ತರಾ ಆಡಲ್ಲಾ, ನಿನಗೆ ನೋವು ಕೊಡಲ್ಲಾ ..ಏನೇನೋ ಮನ ಬೇಡುತ್ತಿತ್ತು, ಆದರೆ ಮಾತು ಮೌನವಾಗಿ , ಮೌನ -ಮಾತುಗಳು ನಿಶ್ಯಬ್ದವಾಗಿ ನಮ್ಮ ಮಧ್ಯೆ ಕುಳಿತಿತ್ತು, ನಮ್ಮನ್ನೇ ನೋಡುತ್ತಿತ್ತು. ಅಲ್ಲಿ ಇಲ್ಲಿ ಸುತ್ತಾಡಿ , ತಲೆಗೆ ತೋಚಿದ್ದು ಮಾತಾಡಿ ಕೊನೆಗೆ ವಾಪಸ್ಸು ಮನೆಗೆ ಮರಳುವ ಹಾದಿಯಲ್ಲಿ ಏನೂ ತೋಚದೇ ಒಂದು ಕಡೆ ನೀನು ಗಕ್ಕನೇ ಬೈಕ್ ನಿಲ್ಲಿಸಿದೆ, ನಾನು ಬೈಕ್ ಹಾರಿ ಇಳಿದು ಮುಂದೆ ಬಂದು ಗಟ್ಟಿಯಾಗಿ ತಬ್ಬಿಕೊಂಡು, ಮುದ್ದುಗರೆದು, ಒಂದೇ ಒಂದು ಕ್ಷಣ ಕೈ ಜಾರಿ ಹೋಗದಂತೆ , ಹಿಡಿದೇ ಬಿಟ್ಟೆನೆನ್ನುವ ಹಪಿಹಪಿಯಲ್ಲಿ, ಕವ್ವನೇ ಕವಿದ ಕತ್ತಲಲ್ಲಿ, ನಿನ್ನೊಳಗೆ ನನ್ನನ್ನು ತುಂಬಿಕೊಡುವ, ಜೀವ ಜೀವ ಬೆರೆಸುವ, ನಿನ್ನ ನೋವನ್ನೆಲ್ಲ ಹೀರುವಂತಾ ಸಿಹಿ-ಸಿಹಿಯಾದ ಮುತ್ತೊಂದು ರಸನಿಮಿಷದಲ್ಲಿ ಮತ್ತೇರಿ, ಎರಡು ಮನಗಳನ್ನು ಸಾಂತ್ವನಗೊಳಿಸತೊಡಗಿ, ಅಷ್ಟೇ ಚುರುಕಿನಿಂದ ತಟ್ಟನೇ ಬೇರೆಯಾಗಿ, ನಿನ್ನ ಭುಜದಕ್ಕೆ ವಿರಮಿಸಿತು. ಮುಂದೆ ಮಾತುಗಳು ಬೇಕಿರಲಿಲ್ಲ.

ರಾಜಾ....ಅಂದೇ ನಾನು ನಿನ್ನ ಪ್ರೀತಿಯಲ್ಲಿ ನನ್ನ ಬದುಕಿನ ಭರವಸೆಯನ್ನು ಕಂಡಿದ್ದೆ. ಸಾಕಲ್ಲವಾ ಇಷ್ಟು.

Monday, March 31, 2008

ರೂಪಾ ...

ರೂಪಾ ನನ್ನ ಬಾಲ್ಯದ ಗೆಳತಿ. ಮನೆ ಪಕ್ಕದವಳು. ನಾವಿಬ್ಬರೂ ಜತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಅವಳಮ್ಮ ಯಾವಾಗಲೂ ’ಮಡಿ’ಯಲ್ಲಿರುತ್ತಿದ್ದುದರಿಂದ ನಮಗೆ ಅವರ ಸಂಪರ್ಕ್ ದೂರದಿಂದಲೇ. ಯಾಕೆ ದಿನದ ಅಡುಗೆಯನ್ನೂ ಮಡಿಯಲ್ಲಿ ಮಾಡುತ್ತಿದ್ದರು? ಯಾಕೆ ಮಾಡಬೇಕು? ಮಡಿ ಹೆಸರಿನಲ್ಲಿ ಯಾವಾಗಲೂ ಗಳುವಿನ ಮೇಲೋ, ಗೂಟದ ಮೇಲೋ ತೂಗಾಡುವ ಕೊಳಕಾದ ಸೀರೆಯುಟ್ಟು, ಅದನ್ನು ಮಡಿಯೆಂದು ಯಾಕೆ ಕರೆಯುತ್ತಿದ್ದರೋ ? ಎಂದೆಲ್ಲ ಯೊಚಿಸುತ್ತಿದ್ದೆ ಆದರೆ ಕೇಳುವ ಧೈರ್ಯಬರುತ್ತಿರಲಿಲ್ಲ. ಬದಲಿಗೆ ಜಾತಿಯ ಬಗ್ಗೆ ನನಗೆ ಮುಜುಗರ, ಕಿರಿಕಿರಿಯೆನಿಸುತ್ತಿತ್ತು.
ಅವರಮ್ಮನನ್ನು ನೋಡಿದರೆ ಸದಾ ನಸುನಗುತ್ತಿದ್ದಾರೆನೋ ಅನಿಸುವಂತೆ , ಮಾಸದ ನಗೆಯೊಂದು ಆಕೆಯ ತುಟಿಯಂಚಿನಲ್ಲಿರುತ್ತಿತ್ತು. ನಮ್ಮ ಉಳಿದ ಹುಡುಗರ ಅವ್ವಂದಿರನ್ನು ತೂಗಿ ನೋಡಿದರೆ ರೂಪನ ಅಮ್ಮನೇ ಎಲ್ಲದರಲ್ಲಿ ಮಾಡರ್ನ, ಮತ್ತು ಹೊಸಕಾಲದ ಅಮ್ಮನಂತಿದ್ದಳು. ಗಿಡ್ಡದಾದ ಬ್ಲೌಸ್ ಹಾಕುತ್ತಿದ್ದಳು, ಗಿಡ್ಡದಾದ ಸೆರಗು ತೆಗೆಯುತ್ತಿದ್ದಳು. ಅದು ಆಗಿನ ಫ್ಯಾಶನ್. ಅಪ್ಪ ಯಾವುದೋ ಊರಲ್ಲಿ ಕೆಲಸಕ್ಕೆ ಅಂತಾ ಅಲ್ಲೇ ಇರುತ್ತಿದ್ದರು, ವಾರಕ್ಕೊಮ್ಮೆ ಅವರು ಬರುತ್ತಿದ್ದುದು. ಮನೆಯಲ್ಲಿ ರೂಪಾ ಮತ್ತು ಅವಳ ಅಣ್ಣ ಅನಿಲ್ ನ ಗಲಾಟೆ ಬಿಟ್ಟರೆ ಅವರ ಅಮ್ಮ-ಅಪ್ಪ ಮಾತೇ ಆಡುವುದಿಲ್ಲವೇನೋ ಎಂಬಂತೆ ತಮ್ಮ ತಮ್ಮ ಲೋಕದ ಮೌನದೊಳಗೆ ಇರುತ್ತಿದ್ದರು. ಪ್ರತಿಬಾರಿಯೂ ಅವಳ ತಂದೆ ಶಾಲೆಗೆ ಕರೆಯಲು ಹೋದ ನನಗೆ ’ನಿನ್ನ ಹೆಸರೇನೆಂದು’ಕೇಳುತ್ತಿದ್ದರು, ಮತ್ತು ನಾನು ಉತ್ತರಿಸುತ್ತಿದ್ದೆ. ಮತ್ತೊಮ್ಮೆ ಅವರು ಬರುವುದರಲ್ಲಿ ಮರೆತು ಬಿಟ್ಟಿರುತ್ತಿದ್ದರೋ ಏನೋ ಮತ್ತೆ ಕೇಳುತ್ತಿದ್ದರು. ಕೊನೆಗೆ ಅವರೇ ತಮಗೆ ಸೂಕ್ತವಾಗುವಂತೆ ನನ್ನ ಹೆಸರನ್ನು ’ಕಾಳಿಕಾ’ಎಂದು ಬದಲಾಯಿಸಿಕೊಂಡರು. ನನಗೆ ಕಾಳಿಕಾ ಎಂದರೇನೆಂದು ಗೊತ್ತಿರದ ಕಾರಣ ಸುಮ್ಮನಾದೆ. ಯಾವುದೋ ದೇವಿ ಹೆಸರೆಂದಷ್ಟೇ ಗೊತ್ತು. ಗುಣವಿಶೇಷದ ಬಗ್ಗೆ ಗೊತ್ತಿರಲಿಲ್ಲ. ಈಗ ಅನಿಸುತ್ತದೆ ಅವರು ವ್ಯಂಗತನದಲ್ಲಿ ಹಾಗೇ ಹೆಸರು ಇಟ್ಟರೋ, ನಾನಂತೂ ಕಾಳಿಕಾ ಎಂದು ಗುರುತಿಸುವಷ್ಟರ ವಿರುದ್ಧವಾಗಿ ರೂಪ ಬಣ್ಣದವಳಿದ್ದೆ. ಇರಲಿ ಆ ಮಾತು. ಏನೋ ತೋಚಿರಬಹುದು. ಅಥವಾ ನನ್ನ ಜಾತಿ ಸೂಚಕವಾಗಿ ಅವರು ಅದನ್ನು ಬಳಸಿದ್ದರೋ ಏನೋ ಗೊತ್ತಿಲ್ಲ. ಅವರನ್ನು ಕೇಳಬೇಕೆಂದರೆ ಎಲ್ಲಿದ್ದಾರೋ, ಇದ್ದಾರೋ ಇಲ್ಲವೋ ಈ ಲೋಕದಲ್ಲಿ ಅದೂ ಸಹ ಗೊತ್ತಿಲ್ಲ. ಈಗ ಈ ಪ್ರಶ್ನೆ ಯಾಕೆ ನೆನಪಾಯಿತೋ ಗೊತ್ತಿಲ್ಲ. ಅದಿರಲಿ, ರೂಪಾಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ, ತುಸು ತೊದಲುತ್ತಿದ್ದಳು. ಹಾಗೇ ನಮಗೂ ಅಭ್ಯಾಸವಾಗಿ ಹೋಗಿತ್ತು.
ಅವರಮ್ಮ ’ಕಡಿಗೆ’ಯಾದಾಗ ( ಮುಟ್ಟಾದಾಗ) ಮೂರು ದಿನ ಹೊರಗೆ ಹುಸಿ( ಪಡಸಾಲೇ)ಯಲ್ಲಿ ಕೂರುತ್ತಿದ್ದರು. ಆಗ ಯಾರೋ ಅಜ್ಜಿ ಬರುತ್ತಿತ್ತು ಮಕ್ಕಳೀಗೆ ಬೇಯಿಸಿಹಾಕಲು. ಹಾಲು ಕಾಯಿಸುವುದು, ಟೀ ಮಾಡುವುದು ಇತ್ಯಾದಿ ಈ ಮಕ್ಕಳೇ ಮಾಡಿಕೊಳ್ಳುತ್ತಿದ್ದವು ಬತ್ತಿಸ್ಟೋವ್ ಮೇಲೆ. ಒಮ್ಮ್ಮೆ ನೆರೆಹೊರೆಯಲ್ಲಿ ಹಾಹಾಕಾರವೆದ್ದಿತ್ತು, ಬೊಬ್ಬೆಹಾಕುವುದು ಇತ್ಯಾದಿ ಕೇಳಿಸಿತು, ನಾವೆಲ್ಲ ಮನೆಯಿಂದ ಹೊರಗೋಡಿ ಬಂದಾಗ ತಿಳಿದಿದ್ದು ’ರೂಪಾಳಿಗೆ ಬೆಂಕಿ ಹತ್ತಿಕೊಂಡಿತ್ತೆಂದು. ಓಣಿಯ ಒಕ್ಕಲಿಗ ಹುಡುಗರು ಧಾವಿಸಿ ಆಕೆಯನ್ನು ಉಳಿಸಿದ್ದರು. ತೊಟ್ಟ ಪ್ರಾಕಿಗೆ ಬೆಂಕಿತಾಗಿದೊಡನೆ ಕಿರುಚುತ್ತ ಹಿತ್ತಲಿಗೆ ಓಡಿ, ಬೆಂಕಿ ಇನ್ನಷ್ಟು ಹೊತ್ತಿಕೊಳ್ಳುವಂತಾಗಿತ್ತು. ರೂಪಾಳ ತೊಡೆ, ಕಾಲು , ಸ್ವಲ್ಪ ಹೊಟ್ಟೆ ಸುಟ್ಟಿದ್ದವು, ಮತ್ತೆಲ್ಲೂ ಸುಟ್ಟಿರಲಿಲ್ಲ. ದೈವದ ದಯೆಯಿಂದ ಜೀವಕ್ಕೇನೂ ಅಪಾಯವಿರಲಿಲ್ಲ. ಬೆಂಕಿಯನ್ನು ಬೇಗನೇ ಆರಿಸಿದ್ದರು. ಈ ಘಟನೆಯಿಂದಾಗಿ ಅವಳಿಗೆ ದೀರ್ಘಕಾಲ ರಜೆಯಾಯಿತು. ನಾನು ದಿನಾ ಅವಳಿಗೆ ಭೆಟ್ಟಿಮಾಡಿ ಶಾಲೆಯ ಪಾಠಗಳಬಗ್ಗೆ, ಹೋಂ-ವರ್ಕ , ಅಭ್ಯಾಸ ಇತ್ಯಾದಿಗಳ ಬಗ್ಗೆ ವರದಿಮಾಡುತ್ತಿದ್ದೆ. ನಾನು ಯಾಕೆ ಈ ಘಟನೆಯ ಬಗ್ಗೆ ಹೇಳಿತ್ತಿದ್ದೆನೆಂದರೆ, ಈ ಘಟನೆಯ ನಂತರ ಆಶ್ಚರ್ಯಕರವಾದ ಬದಲಾವಣೆಯಾಗಿದ್ದೆಂದರೆ, ರೂಪಳ ತೊದಲುವಿಕೆ ನಿಂತುಹೋಗಿತ್ತು. ಪೂರ್ತಿ ಅಲ್ಲದಿದ್ದರೂ ಗಂಭೀರ ಪ್ರಮಾಣದಲ್ಲೇ ನಿಂತುಹೋಗಿದ್ದು. ಬೆಂಕಿಹಚ್ಚಿಕೊಂಡಿದ್ದರೆ ಘಾಬರೀ, ಆಘಾತಗಳಲ್ಲಿ ಅವಳ ಇನ್ನೊಂದು ಸಮಸ್ಯೆ ತನ್ನಿಂದತಾನೆ ಬಗೆಹರಿದಿದ್ದುದು ನಮಗೆಲ್ಲ ಕುತೂಹಲ, ಸಂಭ್ರಮದ ಸಂಗತಿಯಾಗಿತ್ತು. ಅಂತೂ-ಇಂತೂ ರೂಪಾ ಬದಲಾದಳು, ಅವಳ ಕೆಲವು ಸುಟ್ಟಗಾಯಗಳನ್ನು ಬಿಟ್ಟರೆ ರೂಪಾ ರೂಪಾನೇ.
ಯಾಕೋ ಇವತ್ತು ರೂಪಾ ನೆನಪಾಗಿ ಇದೆಲ್ಲ ನೆನಪಿನ ಅಂಗಳದಲ್ಲಿ ಬರೆದಿಟ್ಟೆ....

ಬರೆಯಲು ಆಗದ ಮಂಕುತನ

ಫೆಬ್ರುವರಿಯಿಂದ ನಾನು ಬರೆಯುವ ಸಾಹಸವನ್ನೇ ಮಾಡಿಲ್ಲ. ಯಾಕೋ ಒಂದು ತರಹದ ನಿರುತ್ಸಾಹ, ಸದಾ ಮಂಕುತನ ಕವಿದಿರುತ್ತದೆ. ಸಹೃದಯಿ ಸ್ನೇಹಿತರು ಬರೆಯಲು ಪ್ರೋತ್ಸಾಹಿಸುತ್ತಾರೆ, ಆದರೂ ಮನಸ್ಸು ಮನಸ್ಸಿನೊಳಗಿಲ್ಲದೇ ಈ ಶಹರಿನಿಂದ, ಈ ಉಸಿರುಕಟ್ಟುವ ಬೇಜಾರಿನಿಂದ ಬಿಡಿಸಿಕೊಳ್ಳುವ ಬಗೆಯನ್ನೇ ಮೆಲಕು ಹಾಕುತ್ತಿರುತ್ತದೆ. ಜೀವನದಲ್ಲಿ ಮಹತ್ತರವಾದ್ದನ್ನು ಕಳೆದುಕೊಂಡ ಅನುಭವ, ನೋವು ಎರಡನ್ನೂ ಏಕಕಾಲದಲ್ಲಿ ಅನುಭವಿಸುತ್ತಾ, ತಾನು ಯಾವಾಗ ಸರಿಹೋಗುತ್ತೇನೆ ಎಂದು ಮಾನಸಿಕ ರೋಗಿಯಂತೆ ನನ್ನನ್ನೇ ನಾನು ಕೇಳಿಕೊಳ್ಳುತ್ತಾ, ಮನೆ- ಆಫೀಸು, ಆಫೀಸು-ಮನೆ, ಬಸ್ಸಿನಲ್ಲಿ ಜಾಗ ಹಿಡಿದು ಉಸ್ಸೆಂದು ಕೂರುವಷ್ಟು ಸುಸ್ತು, ನಿರುತ್ಸಾಹ. ಇಡೀ ದಿನ ಯಾವುದೋ ಒಂದು ರಸ ನಿಮಿಷಕ್ಕಾಗಿ ಕಾದು ಕುಳಿತಂತೆ ಕಳೆದು, ಸಂಜೆ ಮನೆ ತಲುಪಿದೊಡನೆ ಕೈ ಕಾಲು ಮುಖತೊಳೆದು, ದೇವರಿಗೆ ನಮಿಸಿ, ಟೀ ನೋ, ಹಾರ್ಲಿಕ್ಸೋ ಕುಡಿದು, ಸಂಜೆ ಅಡುಗೆಯ ಬಗ್ಗೆ ಯೋಚಿಸಿ, ಅದು ಮುಗಿದ ನಂತರ ಟೆರೇಸಿಗೆ ಹಾರುತ್ತೇನೆ. ಮಾರ್ಚ್ ತಿಂಗಳ ತಂಪೆರೆಯುವ ಗಾಳೀಗೆ ಮೈಯೊಡ್ಡಿ ಕುಳಿತು, ಮುಖ ಮೇಲೆ ಮಾಡಿ ಕುಳಿತು ನಕ್ಷತ್ರಗಳನ್ನೇ ನೋಡುತ್ತಾ , ನನ್ನ ಆಲೋಚನೆಗಳಲ್ಲೇ ಮುಳುಗಿ ಬಿಡುತ್ತೇನೆ. ಯಾಕೀ ಒಂಟಿತನ, ಬೇಸರ ? ಈ ನೀಲಿಯಾಕಾಶ, ನಕ್ಷತ್ರಗಳ ಮಧ್ಯೆ, ಇಲ್ಲೇ ನನ್ನ ಪಕ್ಕದಲ್ಳೇ ಅವನಿದ್ದಾನೋ ಎಂದು ಭ್ರಮಿಸುವ ನನ್ನ ಸೆಳೆತ ಮತ್ತೆ ಅವನ ಕರೆಗಾಗಿ ಇನ್ನೂ ಎರಡು -ಮೂರು ತಾಸು ಕಾಯಬೇಕಲ್ಲವೆಂಬ ಕಾಯುವಿಕೆಯ ಲವಲವಿಕೆ. ಈಗ ಅನಿಸುತ್ತದೆ ನನ್ನೆಲ್ಲಾ ಬೇಸರದ ಹಾಗೂ ಈ ಸಂಜೆಯ ತಂಪಿನ ಲವಲವಿಕೆಯನ್ನು ತುಂಬಿಕೊಟ್ಟವನಿಗೆ ನೆನಪಿನ ನಮನಗಳು. ಹೀಗೆ ಬೇಸರ ಭಾರವೆನಿಸುವಲ್ಲಿ ನೀ ಮತ್ತೆ ಮತ್ತೆ ನನ್ನನ್ನು ಹಗುರಾಗಿಸಿ, ಹಸಿಯಾಗಿಸುತ್ತಿರು ದೇವ’ಎಂದು.
ನಾಳೆ ಮತ್ತೆ ಬರೆಯುವೆ, ಈ ಬೇಸರ ಹಾಗೂ ಸೋಮಾರಿತನ ಕಾಡದಿರಲಿ ದೇವರೇ...

Saturday, February 9, 2008

ಏನೋ ಒಂಥರಾ...

ಏನು ಹೇಳಲಿ? ಜೀವನವೇ ಒಂಥರಾ ಆಗಿಬಿಟ್ಟಿದೆ. ಮೊನ್ನೆ ಅಪೋಲೋ ದಿಂದ ೪೭೯ ( ಬದರ್ ಪುರದಿಂದ ಪಂಜಾಬಿ ಬಾಗ್ ಹೋಗುವ ಬಸ್ಸು) ಬಸ್ಸು ಏರಿದೆ. ತುಂಬಾ ರಷ್ಯು. ಕೂರಲು ಜಾಗವೇ ಇರಲಿಲ್ಲ, ನಿಂತುಕೊಂಡೆ ಇದ್ದೆ. ಯಾವ ಗಂಡಸೂ ಎದ್ದು ಸೀಟು ಕೊಡಲಿಲ್ಲ, ನಾನು ಆಗ್ರಹ ಪಡಿಸಲೂ ಇಲ್ಲ. ಆದರೆ ಸುತ್ತಲೂ ಸುಮ್ಮನೇ ಕಣ್ನಾಡಿಸಿದೆ. ಯಾರಿಗೂ ಈ ಲೋಕದ ಪರಿವೆಯಿಲ್ಲದಂತೆ, ಯಾರಿಗೂ ಯಾರ ಹಂಗಿಲ್ಲದವರಂತೆ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರಂತೆ ತಮ್ಮ ತಮ್ಮ ಲೋಕದಲ್ಲೇ ಮುಳುಗಿದ್ದರು. ಒಬ್ಬ ಮೋಬೈಲ್ ನಲ್ಲಿ ಜಗತ್ತಿನಲ್ಲಿ ತಾನೊಬ್ಬನೇ ಇದ್ಡೇನೆ, ಎನ್ನುವಂತೆ ಜೋರು, ಜೋರಾಗಿ ಮಾತನಾಡುತ್ತಿದ್ದ, ಅದೇ ರೀತಿ ಒಬ್ಬ ಹುಡುಗಿತ ನ್ನ ಹುಡುಗನೊಂದಿಗೆ ವಾದಕ್ಕಿಳಿದಿದ್ದಳು, ಇನ್ನೊಬ್ಬ ಹೆಂಗಸು ಟೈಮಿಗೆ ಸರಿಯಾಗಿ ಆಫೀಸ್ ತಲುಪಲಾಗದೇ ತನ್ನ ಸಹೋದ್ಯೋಗಿಯೊಬ್ಬರಿಗೆ ತಮ್ಮ ಬಾಸ್ ಗೆ ತಿಳಿಸುವಂತೆ ಅಲವತ್ತುಕೊಳ್ಳುತ್ತಿದ್ದರು. ಇನ್ಯಾರೋ ರಾಜಕೀಯ ಸುದ್ದಿ, ಮಾಯಾವತಿಯ ಸಾಹಸವನ್ನೂ , ಬ್ರಷ್ಟಾಚರದಲ್ಲಿ ಅವಳೇನೂ ಕಮ್ಮಿಯಿಲ್ಲವೆಂದೂ ಒಬ್ಬನೆಂದರೇ ಅವಳಷ್ಟು ಶಿಸ್ತಿನ, ಕಠೋರ ಪ್ರವೃತ್ತಿಯವರೇ ಉತ್ತರ ಪ್ರದೇಶ ಅದರಲ್ಲೂ ಗಾಜಿಯಾಬಾದ್ ದಂತಹ ಗೂಂಡಾಗಿರಿ ಪ್ರದೇಶದಲ್ಲಿ ಮಾಯಾವತೀ ಆಡಳಿತ ನಡೆಸಿದಂತೆ ಮತ್ಯಾರೂ ಅಲ್ಲಿ ಸೈ ಅಲ್ಲ ಬೀಡು ’ಎಂದು ಡಿಬೇಟ್ ನಡೆಸಿದ್ದರು. ಸೀಟು ಸಿಕ್ಕವರು ತಮಗೆ ಸಿಂಹಾಸನವೇ ಸಿಕ್ಕಿದೆ ಎನ್ನುವಂತೆ ವಿರಾಜಮಾನರಾಗಿ ಕುಳಿತಿದ್ದರು. ಸೀಟ್ ಸಿಕ್ಕ ಕೆಲ ಗಂಡಸರು ನಿದ್ದೆ ಮಾಡುತ್ತಿರುವವರಂತೆ ನಾಟಿಸುತ್ತಾ ಕಿಟಕಿಗೆ ತಲೆ ಆನಿಸಿಯೋ, ಇಲ್ಲಾ ತಲೆ ಕೆಳಗೆ ಹಾಕಿಕೊಂಡೋ ಕುಳಿತಿದ್ದರು. ಎಲ್ಲಿ ತಲೆ ಎತ್ತಿದರೇ ನಿಂತುಕೊಂಡ ಹೆಂಗಸರು ಜಾಗ ಖಾಲಿಮಾಡಿಸುತ್ತಾರೋ ಎಂಬ ಹೆದರಿಕೆಯಿಂದ ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡು ನಿದ್ದ್ರೆಯಲ್ಲಿದ್ದರು. ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರನ್ನು ಅವರ ಲೋಕದಲ್ಲಿ ಬಿಟ್ಟರೇ ಉಳಿದವರೆಲ್ಲ ತಮ್ಮ ತಮ್ಮ ಲೋಕದಲ್ಲಿ ವಿಶಿಷ್ಟದವರಂತೆ ತುಂಬಾ ಬಿಸಿಯಾಗಿದ್ದರು. ಎಲ್ಲವನ್ನೂ ನೋಡುತ್ತಾ...ನೋಡುತ್ತಾ...ಯಾಕೋ ಒಂಥರಾ ಅನಿಸತೊಡಗಿತು....ಏನೋ ಒಂಟಿತನಾ, ಶೂನ್ಯತೆ...ಲೋಕವೇ ವಿಚಿತ್ರ ಲೋಕದಂತೆ ಕಾಣಿಸತೊಡಗಿತು. ಈ ಮೊಬೈಲ್ ಲೋಕದಲ್ಲಿ ಮೊಬೈಲ್ ಮೊಬೈಲ್ ಸಮ್ಪರ್ಕವಿದೆ, ಗುರುತು ಪರಿಚಯವಿದೆ ಹೊರತು ಮನುಷ್ಯ ಮನುಷ್ಯರ ನಡುವೆ ಆಸುಪಾಸಿನಲ್ಲೇ ಇಲ್ಲ. ಇದ್ದವರು ನಿರ್ಜೀವಿಗಳಂತೆ ಕಾಣತೊಡಗಿದರು. ಎನೋ ಒಂಥರಾ ಕಸಿವಿಸಿಯಾಗತೊಡಗಿತು........

Friday, February 8, 2008

ಚಾಟ್ ....ಮತ್ತು ’ನಾನಿದ್ದೇನೆ’..... ಮೈ ಹೂಂ ನಾ,,,,,,,

ರವೀ ನಿನ್ನೆ ಚಾಟ್ ನಲ್ಲಿ ಸಿಕ್ಕಿದ್ದ.
ಹೀಗೆ ನಾಲ್ಕೈದು ವರ್ಷಗಳ ಹಿಂದೆ ಆತ ಚಾಟ್ ನಲ್ಲಿ ಸಿಕ್ಕಿ ಮಾತಾಡ್ತಾ ಮಾತಾಡ್ತಾ ಒಳ್ಳೆ ಸ್ನೇಹಿತನಾಗಿದ್ದ. ಆಗೊಮ್ಮೆ ಈಗೊಮ್ಮೆ ಮೆಸೆಂಜರ್ ನಲ್ಲಿ ಬಂದಾಗ, ಅಕಸ್ಮಾತ್ತಾಗಿ ತಾನೂ online ಇದ್ದು ಮಾತಿಗೆ ಸಿಕ್ಕಿಬಿಟ್ಟರೆ ಸಾಕು, ನಾವು ಮಾತನಾಡದ ವಿಷಯವೇ ಇಲ್ಲ. ಮನೆ, ಮಕ್ಕಳು, ನಮ್ಮ ನಮ್ಮ ಬದುಕು, ಜಂಜಾಟಗಳು ದೆಹಲಿ ಜೀವನ, ದೆಹಲಿಯ ವಿಪರೀತ ಹವಾಮಾನ, ಅವನ ದೆಹಲಿವಾಸ, ಅವನ ಕೆಲಸ, ಅವನ ಗೆಳತಿಯರು, ರಾಜಕೀಯ, ಸ್ನೇಹಿತರು, ಮತ್ತೆ ನಮಗಷ್ಟೇ ಗೊತ್ತಿರುವ ಗುಟ್ಟುಗಳು, ಪ್ರೇಮ ಕಾಮ ಇತ್ಯಾದಿ ಒಂದೇ ಎರಡೇ ಸಾವಿರ ಸುದ್ದಿಗಳು, ಮಾತಾನಾಡದ ವಿಷಯವೇ ಇಲ್ಲ. ಯಾವತ್ತೂ ಬೋರ್ ಹೊಡೆದಿಲ್ಲ ನಾನು. ಮೊದಮೊದಲು ಅವನೋಂದಿಗೆ ಮಾತನಾಡಲು ವಿಷಯವೇ ಸಿಗುತ್ತಿರಲಿಲ್ಲ, ಈಗ ಯಾಕೋ ರವಿಯೆಂದರೆ ಅಚ್ಚುಮೆಚ್ಚು ನನಗೆ. ಹೆಚ್ಚು ಸಂಪರ್ಕವಿರದಿದ್ದರೂ ಯಾವಾಗಾದರೂ ಒಮ್ಮೆ ಮೆಸೆಂಜರ್ ನಲ್ಲಿ ಕಂಡರೆ ಮಾತನಾಡುವಷ್ಟು ಸ್ನೇಹವಿದೆ. ಕಿವಿಗೊಟ್ಟು ಕೇಳುವ ಅಂತಕರಣವಿದೆ. ಯಾವತ್ತಲೂ ನನಗೆ ಒಂದಿಲ್ಲಾ ಒಂದು ವಿಷಯದ ಬಗ್ಗೆ ಬಹಳ ಮುತುವರ್ಜಿಯಿಂದ ಸಲಹೆ ಕೊಡುತ್ತಾನೆ. ಕಿವಿಗೊಟ್ಟು ಕೇಳುತ್ತಾನೆ, ಎಂದೂ ಬೇಸರಿಸಿಲ್ಲ. ತಾನೆಲ್ಲೋ ಒಂದಿಲ್ಲಾ ಒಂದು ಗೊಂದಲದಲ್ಲಿ, ಚಿಂತೆಯಲ್ಲಿ ಮುಳುಗಿದಾಗ ಆತ ಆಪದ್ಬಂಧುವಂತೆ ಚಾಟ್ ನಲ್ಲಿ ಬಂದು ತನಗೆ ಸಮಾಧಾನ ಪಡಿಸಿರುತ್ತಾನೆ....
ಈಗ ಆಗಿದ್ದೂ ಅದೇ. ಮನೆಯಲ್ಲಿ ಗಂಡನಿಗೆ ಹದಿನೈದು ದಿನಗಟ್ಟಲೇ ಭೇದಿಯಾಗಿ ಹುಷಾರಿಲ್ಲದೇ,ಆತ ತನ್ನ ಯಾವುದೊಂದು ಮಾತು ಕೇಳದೇ, ಎಲ್ಲೂ ತೋರಿಸಿಕೊಳ್ಳದೇ ವಿಪರೀತಕ್ಕೀಡಾದಾಗ ತಾನೇ ಕಣ್ಣೀರಿಡುತ್ತಾ ಅಪೋಲೊದಲ್ಲಿ ದೊಡ್ಡ ಸ್ಪೆಶಿಯಾಲಿಸ್ಟ್ ಕಡೆ ತೋರಿಸಿ ಈಗತಾನೆ ತುಸು ಸುಧಾರಿಸಿಕೊಂಡಿದ್ದಾನೆ. ಆಗೆಲ್ಲ ಕಾಡಿದ ಅಸುರಕ್ಷಾ ಭಾವ, ಒಂಟಿತನ, ತಬ್ಬಲಿಯಂತಾಗಿ ಬಿಡುವ ಭಯ, ತನಗೆ ಯಾರೂ ಇಲ್ಲವೆನ್ನುವ ನೋವು ಯಾರಲ್ಲಿ ಹೇಳಿಕೊಳ್ಳುವುದು. ? ಯಾರೂ ಇಲ್ಲವೆನ್ನುವ ನೋವಿನಲ್ಲೇ ನನ್ನ ಆಪದ್ಬಂಧು ರವೀ ಚಾಟ್ ನಲ್ಲಿ ಕಾಣಿಸಿಕೊಂಡಿದ್ದು. ಅವನಲ್ಲಿ ಎಲ್ಲ ಹೇಳಿಕೊಂಡು, ಅಳುತ್ತಳುತ್ತಲೇ ಟೈಪಿಸುತ್ತಿದ್ದೆ. ಎಲ್ಲ ಕೇಳಿದ ರವಿ ಅಂದಿದ್ದು, ಯಾಕೆ ನಾನಿಲ್ಲವಾ? ನಿನ್ನ ಯಾವದೇ ಸಮಯದಲ್ಲೂ ಒಬ್ಬಳೇ ಎಂದು ತಿಳಿಯಬೇಡಾ, ನಾನಿದ್ದೇನೆ, ಒಂದು ಮಿಸ್ಸ್ಡ್ ಕಾಲ್ ಕೊಡು, ನಾನು ಫೋನಾಯಿಸುತ್ತೇನೆ, ಮೈ ಹೂಂ ನಾ, ಯಾವುದೇ ತೊಂದರೆ ಇರಲಿ, ನನ್ನಲ್ಲಿ ಹೇಳು, ಸಂಕೋಚಿಸಿಕೊಳ್ಳದೇ ಯಾವುದೇ ಸಹಾಯವನ್ನಾದರೂ ಕೇಳು ಅನ್ನುವಾಗ ಎದೆ ತುಂಬಿ ಬಂದು ಕಣ್ಣ ಮೂಲಕ ಹರಿದು ಹಗುರವಾಗತೊಡಗಿತು. ಇಷ್ಟು ದಿನದ ದುಗುಡವನ್ನು ಒಂದೇ ಮಾತಿನಿಂದ ಅಳಿಸಿ ಹಾಕಿದ, ನನ್ನೆಲ್ಲಾ ಆತ್ಮವಿಶ್ವಾಸವನ್ನು ಒಂದುಗೂಡಿಸಿ ಧೈರ್ಯ ನೀಡಿದ ರವಿಗೆ ನನ್ನ ಹೃತ್ಪೂರ್ವಕ ನಮನಗಳು. ಮನ ಒಂದೇ ಸಮನೇ ತುಂಬಿ ಬರುತ್ತಿತ್ತು. ಸಧ್ಯ ದೇವರೇ ಅವನನ್ನು ನನ್ನ ಸಮಾಧಾನ ಪಡಿಸಲೊಸುಗ ಕಳಿಸಿರಬಹುದೆಂದು ಕಾಣದ ದೈವಕ್ಕೆ ಮನದಲ್ಲೇ ವಂದಿಸಿದೆ.
ರವಿ ಕೇಳುತ್ತಿದ್ದ, ಮತ್ತೆ ದೆಹಲಿಯೆನೆನ್ನುತ್ತದೆ. ಇಲ್ಲಿ ತುಂಬಾ ಛಳೀ ಇದೆ, ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿದೆ, ಮಂಜಿನ ತೆಳು ಪರದೆ ಹೊದ್ದ ದೆಹಲಿಯಲ್ಲಿ ನನಗಂತೂ ಎಲ್ಲೂ ಹೋಗೊಕ್ಕೆ ಆಗಲ್ಲ ಆದ್ರೂ ಆಫೀಸಿಗೆ ಬರಲೇ ಬೇಕು. ಥೂ ದರಿದ್ರ ಛಳಿ ಅಂದದ್ದಕ್ಕೆ ಆತನ ದೃಷ್ಟಿಕೋನವೇ ವಿಭಿನ್ನವಾಗಿತ್ತು. ಯಾಕೆ ಹಾಗೇಕೆ ತಿಳಿದುಕೋಬೇಕು ? ನಾವಿರುವ ದೇಶವೆಷ್ಟು ಸುಂದರ. ಇಲ್ಲಿ ಎಲ್ಲಾ ಋತುಮಾನಗಳನ್ನು ನಾವು ಕಾಣುತ್ತೇವೆ. ಬೇರೆ ದೇಶಗಳಲ್ಲಿ ಇಲ್ಲದ ವಿಭಿನ್ನ, ವಿವಿಧ ಹವಾಗುಣ ನಮ್ಮದು. ಬೇಸಿಗೆ, ಮಳೆ, ಛಳಿ, ಬೇಸಿಗೆ ಮತ್ತು ಮಳೆ ನಡುವಿನ ಆಷಾಡದ ಭೊರ್ರೋ ಎನ್ನುವ ಗಾಳಿಯಿದೆ, ಮಳೆ ಮತ್ತು ಛಳಿ ನಡುವಿನ ಶರದೃತುವಿದೆ, ಛಳಿ ಮತ್ತು ಬೇಸಿಗೆ ನಡುವಿನ ವಸಂತ ಋತುವಿದೆ. ಥರಗುಡುವ ಛಳಿಯಲ್ಲೂ ಧನುರ್ಮಾಸ, ಮಾಘಸ್ನಾನ ಪುಣ್ಯದಿನಗಳ ಸಂಕ್ರಮಣವಿದೆ ಎಷ್ಟು ಸೊಗಸಾದ ದೇಶ ನಮ್ಮದು. ಇದಕ್ಕಾಗಿ ಖುಶಿ ಪಡಬೇಕು. ಆಷ್ಟೇ ಖುಶೀ ನಾವು ಪಡೆದು ಕೊಂಡ ಮಾನವ ಜನ್ಮಕ್ಕಾಗಿ. ರವೀ ಚಾಟ್ ಬಾಕ್ಸ್ ನಲ್ಲಿ ಟೈಪಿಸುತ್ತಿದ್ದ, ನನಗೆ ಅವ ನನ್ನ ಹತ್ತಿರವೇ ಕುಳಿತು ಮಾತಾನಾಡಿದಂತೆ, ಅವನ ಒಂದೊಂದು ಮಾತೂ ನನ್ನ ಒಂದೊಂದು ನೋವನ್ನು, ಅವಿವೇಕಿತನವನ್ನು ತೊಡೆದು ಹಾಕುವಂತೆ ಭಾಸವಾಗುತ್ತಿತ್ತು. ಈ ಕ್ಷಣ ಉರುಳದಿರಲಿ ಎಂದು ಮನ ಹಾರೈಸುವಂತೆ. ದೇವರು ನನಗೆ ಇಂಥ ಒಬ್ಬ ಗೆಳೆಯನನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಮೌನದಲ್ಲೇ ಅರ್ಪಿಸುತ್ತ....ಮಾತುಗಳನ್ನು ಕೇಳುತ್ತಾ ಕುಳಿತಿದ್ದೆ. ಹೊರಗೆ ಬಾಲ್ಕನಿಯಲ್ಲಿ ಮಳೆಯ ತುಂತುರು ತುಂತುರು ಹನಿ ನಿಂತು ರವಿ ಮೂಡಿ ಹಿತವಾದ ಎಳೆಬಿಸಿಲು ಅರಳುತ್ತಿತ್ತು.....ನೋಡುತ್ತಲೇ ಇದ್ದೆ.
ರವೀ ಇಂದು ಚಾಟ್ ನಲ್ಲಿ ಬರುತ್ತಾನಾ ಅಂತ ಕಾಯುತ್ತಾ..........ಮುಗಿಸುತ್ತಿದ್ದೇನೆ.

Thursday, January 24, 2008

ಮನುಷ್ಯನಿಗೆ ನಿರೀಕ್ಷೆ ( expectations) ಗಳೆನ್ನುವುದು ಇರದಿದ್ದರೆ ಬಹುಶಃ ಅವನಷ್ಟು ಸುಖೀ ಇನ್ಯಾವ ಜೀವಿಯೂ ಇರುತ್ತಿರಲಿಲ್ಲವೇನೋ. ಈ ನಿರೀಕ್ಷೆ ಅನ್ನುವುದು ನಾವು ಇನ್ನೊಬ್ಬರಿಂದ , ಆ ಇನ್ನೊಬ್ಬರು ನಮ್ಮಿಂದ ಏನನ್ನೋ ಬಯಸುವದೇ ಆಗಿದೆ. ಅದೇ ಕೆಲವೊಮ್ಮೆ ನೋವು-ನಿರಾಸೆಗೆ ಕಾರಣವೂ ಹೌದು. ಗಂಡ-ಹೆಂದತಿ, ತಾಯಿ ತಂದೆ, ಅಕ್ಕ-ತಂಗಿ, ಅಣ್ಣ - ತಮ್ಮ , ಅತ್ತಿಗೆ, ಸೊಸೆ - ಮಗಳು ಇತ್ಯಾದಿ ಇತ್ಯಾದಿ ಎಲ್ಲಾ ಮಾನವ ಸಂಬಂಧಗಳು , ಎಲ್ಲ ಸಂಬಂಧಗಳನ್ನು ಹೊಸೆದಿರುವ -ಬೆಸೆದಿರುವ ಪ್ರೀತಿ,ವಾತ್ಸಲ್ಯ ,ಮೋಹ- ಮಮತೆ- ಅಂತಕರಣ ಎಂಬ ಕೊಂಡಿ ಗಟ್ಟಿಮುಟ್ಟಾಗಿರುವುದೇ ಈ ನಿರೀಕ್ಷೆಯ ಮೇಲೆನೋ ಅನಿಸುತ್ತದೆ. ನಾವು ಎನನ್ನೂ ಅಪೇಕ್ಷಿಸದೇ ಇರಬಲ್ಲೆವು, ನಿಜವಾದ ಪ್ರೀತಿ- ಸ್ನೇಹದಲ್ಲಿ ನಾವು ಹೆಚ್ಚು ಎನನ್ನೂ ಅಪೇಕ್ಷಿಸಬಾರದು, ಕರ್ಮ ಕರೋ, ಫಲ್ ಕೀ ಅಪೇಕ್ಷಾ ಮತ್ ಕರೋ" ಎನ್ನುವ ಹಿತವಚನವೆಲ್ಲ ಗೊತ್ತಿದ್ದರೂ, ಹಾಗೇ ಎನನ್ನೂ ಅಪೇಕ್ಷಿಸದೇ ಇರುವುದು ಅಸಾಧ್ಯ’. ಕನಿಷ್ಠಪಕ್ಷ ಪ್ರೇಮ ಮತ್ತು ಸ್ನೇಹ ಸಂಬಂಧದಲ್ಲಿ ಅಪೇಕ್ಷಿಸಬಾರದೂ ಅನ್ನುವುದು ಎಲ್ಲವನ್ನೂ ಸುಳ್ಳಾಗಿಸಿಬಿಡುತ್ತದೆ. ಮನಸ್ಸ ಹಠ ಹೂಡುತ್ತದೆ. ಬಯಸುತ್ತದೆ, ಕಾಡುತ್ತದೆ. ನಾನು ಅವನ ಕಷ್ಟಕಾಲದಲ್ಲಿ ಎನೆಲ್ಲ ಮಾಡಿದೆ, ನನ್ನ ಕೆಟ್ಟ ಸಮಯಕ್ಕೆ ಅಂವ ಹೇಗಿದ್ದಿ ಎಂದು ವಿಚಾರಿಸಲೂ ಇಲ್ಲ," ನಾನು ಎಷ್ಟು ಅವಳ ಬಗ್ಗೆ ಕಾಳಜಿ ತೋರುತ್ತೇನೆ , ಮಕ್ಕಳನ್ನು ನೋಡಿಕೊಳ್ತಾ ಇದ್ದೆ , ಅವಳಾ ಹೇಗಿದ್ದಿಯಮ್ಮ ಅಂತಾ ಒಂದು ಫೋನ್ ಕೂಡಾ ಮಾಡಲ್ಲ ಎನ್ನುವ ಅಮ್ಮ. ಹೀಗೆ ನಮ್ಮವರೆನ್ನುವವರೊಂದಿಗೆ, ಕರುಳು ಸಂಬಂಧ, ಸ್ನೇಹ ಸಂಬಂಧದಲ್ಲಿ ಹೀಗೆ ಇಷ್ಟನ್ನಾದರೂ ಅಪೇಕ್ಷಿಸಬಾರದಾ? ಚೂರೇ ಚೂರನ್ನಾದರೂ ಅಪೇಕ್ಷಿಸುವುದು ತಪ್ಪಾ ? ಎನು ದೊಡ್ಡ ಘನವಾದುದನ್ನು ಬೇಡಿದ್ದೇವೆ ? ಒಂದು ಫೋನ್ ಕಾಲ್ ಮಾಡಿ ಹೇಗಿದ್ದಿಯಾ? ಹೇಗಿದ್ದೀ ಅಂದರೆ ಸಾಕು ಖುಶಿಯಾಗುತ್ತದೆ ಜೀವಕ್ಕೆ.



ಅವನಿಗೂ ಹೀಗೆ ತಿಳಿಸಿ ಹೇಳಿ ಎನೂ ಪ್ರಯೋಜನವಿಲ್ಲ. ಒಂದು ಕಾಲ್ ಮಾಡೊಕ್ಕೂ ಪುರಸೊತ್ತಿಲ್ಲವಾ ? ಅಂತಾ ಕೇಳಿದರೆ ಅಯ್ಯೋ ನೀನ್ ಜಾಸ್ತಿ expect ಮಾಡ್ತಿ ಅಂತ ಚುಚ್ಚುತ್ತಾನೆ. ಅದಕ್ಕೆ ಇವತ್ತು ಬೆಳಗ್ಗಿನಿಂದ ಇದನ್ನೆ ಯೋಚಿಸ್ತಾ ಇದ್ದೇನೆ. ಯಾಕೆ ಎಲ್ಲಾ ಸಂಬಂಧಗಳ ನಾಜೂಕಿನ ಎಳೆಗಳು ಈ ಅಪೇಕ್ಷೆಯೆಂಬ ಕತ್ತಿಯಲುಗಿನ ಮೇಲೆ ನಿಂತಿದೆ ಎನಿಸುತ್ತದೆ. ಎನು ಇಷ್ಟು ಚಿಕ್ಕ ಸಲುಗೆಯೂ ಮಾಡಬಾರದ , ಬೇಡಬಾರದ ‘ಅಪೇಕ್ಷೆ’ ಅತಿಯಾಯಿತೇ ? ಇಷ್ಟೂ ಇಲ್ಲದ ಮೇಲೆ ಅರ್ಥವೇನು ಉಳಿಯಿತು ನಾನು -ನೀನು ಎಂಬ ಸಂಬಂಧಕ್ಕೆ ? ಬರೀ ನೀನು ನೀನೆ ಎಂಬ ಸ್ವಾರ್ಥದಲ್ಲಿ ಬದುಕುತ್ತಿರುತ್ತಿ, ನಿನ್ನ ಹಾಗೆ ನನಗೆ ನಾನೆಂಬ ಸ್ವಾರ್ಥದಲ್ಲಿ ಬದುಕಲು ಆಗುತ್ತಿಲ್ಲ, ಮತ್ತೆ ಮತ್ತೆ ನಿನ್ನ ಸಮಸ್ಯೆಗಳಿಗೆ, ಗೋಳುಗಳಿಗೆ ಕಿವಿಯಾಲಿಸತೊಡಗುತ್ತೇನೆ. ನನ್ನವೇನಾದರೂ ನಿನಗೆ ಹೇಳಬೇಕೆಂದರೆ ನಿನಗೆ ನನಗಾಗಿ ಸಮಯವಿಲ್ಲ. ಕೇಳುತ್ತಿಲ್ಲ ಎಂದು ಒಂದೇ ಮಾತು ಹೇಳಿದರೆ ಅದು ನನ್ನ expectations ಜಾಸ್ತಿಯೆಂಬ ಮೊನಚುಮಾತಾಗುತ್ತದೆ.



ಈಗ ಹೇಳಿ ನಾವು ಯಾರಿಂದಲೂ ಏನನ್ನೂ ಅಪೇಕ್ಷಿಸದೇ ಇರಲು ಸಾಧ್ಯವಾ? ಅಪೇಕ್ಷೆಯಿಲ್ಲದ ಯಾವ ಸಂಬಂಧಗಳು ಬದುಕಿ ಉಸಿರಾಡಲು ಸಾಧ್ಯವಾಗಿವೆಯೇ? ನಾವು ಪ್ರೀತಿಸುವವರಲ್ಲಿ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ, ಅವರಲ್ಲಿ ಅಪೇಕ್ಷಿದೇ ದಾರಿಹೋಕರಲ್ಲಿ ಅಪೇಕ್ಷಿಸುತ್ತೇವೆಯಾ ?

Wednesday, January 23, 2008

Lift......

ಲಿಫ್ಟ್.......

ಹಸಿರು ಮರಗಳೆಲ್ಲ ಬಿಳಿ ಚಾದರ್ ಹೊದ್ದು ಮಲಗಿವೆ ಛಳಿಗೆ, ಹಳದಿ, ಕೆಂಪು , ಬಿಳಿ ಬಣ್ಣದ ಚಿಕ್ಕ ಚಿಕ್ಕ ಹೂಗಳು ಮುತ್ತಿನಂಥ ಇಬ್ಬನಿಯನ್ನು ಹೊದೆದು ತುಸುಹೊತ್ತಿನಲ್ಲಿ ಗೌರವರ್ಣದ ಬಿಸಿಲಿಗೆ ಕರಗಲು ಕಾದು ಕುಳಿತಿವೆಯೇನೋ ಎನ್ನುವಂಥಾ ಪ್ರಕೃತಿ ಒಂದು ಸುಂದರ ಪೇಯಿಂಟಿಗನಂತೆ ಹರಡಿ ನಿಂತು ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು. ತನಗೆ ಅತ್ಯಂತ ಪ್ರಿಯವಾದ ಗುಲ್ ಮೊಹರ ಮರ ಹೂಗಳಿಲ್ಲದೇ ತನ್ನಂತೆ ಸಪ್ಪಗೇ ನಿಂತಿದೆ. ಈಸ್ಟ್ ಆಫ್ ಕೈಲಾಸ್ನ ’ನೆರುಲಾ’ದಲ್ಲಿ ಬೆಳ್ಗಿನ ಒಂಭತ್ತೂ ವರೆಗೆ ಪೀಕೆನ ಎದುರಿಗೆ ಕುಳಿತು ಬಿಸಿ ಬಿಸಿ ಹಬೆಯಾಡುವ ಟೊಮ್ಯಾಟೋ ಸೂಪ್ ಹಾಗೂ ಹರಾ ಮಟರ್ ಕಾ ಕಬಾಬ್ ಮೆಲ್ಲುತ್ತಿದ್ದ ಅವಳ ಮನಸ್ಸೆಲ್ಲಾ ವ್ಯಗ್ರವಾಗುತ್ತಿತ್ತು. ಒಂಥರಾ ಖಾಲಿತನ. ಒಂಥರಾ ಜುಗುಪ್ಸೆ...ಮಾನಸಿಕವಾದ ಅಸಹನೆ, ಹಿಂಸೆ, ಮನಸ್ಸು ಮನಸ್ಸಿನಾಚೆಗೆ ಎಲ್ಲೋ ಹೋಗಿರುತ್ತದೆ, ಕಿವಿಗೆ ಪೀಕೆನ ಯಾವ ಮಾತುಗಳೂ ಕೇಳುತ್ತಿಲ್ಲವೆಂಬ ಅನಿಸಿಕೆ ಮತ್ತು ನಿರಾಳವಾದ ಸಮಾಧಾನ. ಅವನು ಏನೆನೋ ಹೇಳುತ್ತಿರುತ್ತಾನೆ ಅವೆಲ್ಲಾ ತನಗಿಷ್ಟವಿಲ್ಲದ ಟಾಪಿಕ್ ಗಳೇ ಆಗಿದ್ದಾಗ ಕಿವಿ ಕೇಳಿಸುತ್ತಿದೆಯೆಂದು ನಟಿಸುತ್ತಾ ಇದ್ದರೆ ಮನಸ್ಸೊ ಬೇರೆಲ್ಲೋ ಹಾರಿ ಹೋಗಿರುತ್ತದೆ. ಯಾಕೆ ತಾನು ಈ ಪೀಕೆನೊಂದಿಗೆ ಸೂಪ್ ಕುಡಿಯಲು ಬಂದೆ ? ಗೊತ್ತಾಗುತ್ತಿಲ್ಲ. ಒಲ್ಲೆ ಎನ್ನಲು ಆಗದ ಸೌಜನ್ಯತೆಗೋ , ಅವನು ದಿನಾ ತನ್ನನ್ನು ಆಫೀಸು ತಲುಪಿಸುತ್ತಿದ್ದಾನೆಂಬ ದಾಕ್ಷಿಣ್ಯಕ್ಕೊ ಅರ್ಥವಾಗುತ್ತಿಲ್ಲ.
ಇತ್ತೀಚೆಗೆ ಆರು ತಿಂಗಳಿನಿಂದಾ ಪೀಕೆನೇ ಸೆಕ್ಟರ ಮೂವತ್ತೇಳರಿಂದ ಬೆಳಿಗ್ಗೆ ಪಿಕ್ ಮಾಡ್ತಾನೇ, ಸಂಜೆಗೂ ಅವ ತನ್ನ ಮೆಹರೌಲಿ ಆಫೀಸಿನಿಂದ ಹೊರಟು ಸೌಥ್ ಎಕ್ಸ್ಟ್ ನಲ್ಲಿರುವ ತನ್ನ ಬ್ಯಾಂಕಿನಿಂದ ಪಿಕ್ ಮಾಡುತ್ತಾನೆ. ಯಾಕೆ ತಾನು ಕುರಿಯಂತೆ ಅವನನ್ನು ಹಿಂಬಾಲಿಸುತ್ತೇನೆ? ಅವನೆಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಮನೆಗೆ ಬೇಗ ತಲುಪುತ್ತೇನೆಂಬ ಒಂದೇ ಒಂದು ಕಾರಣ ಮತ್ತು ಬೇಗ ಮನೆ ಸೇರುವ ತವಕ ಬಿಟ್ಟರೆ ತನ್ನಲ್ಲಿ ಏನೂ ಇಲ್ಲ. ಯಾವ ಭಾವನೆಗಳೂ ಇಲ್ಲ. ಇದೇನು ತನ್ನ ಕೇಡುಗಾಲ ? ಏನಾಗಿದೆ ತನಗೆ ? ಯಾವ ಕೆಟ್ಟ ಘಳಿಗೆಯಲ್ಲಿ ತಾನವನಿಗೆ ತಾನು ನೋಯ್ಡಾದಲ್ಲಿ ವಾಸಿಸುತ್ತೇನೆ ಅಂತಾ ಒದರಿದಳೋ ಅವತ್ತಿನಿಂದಾ ಗಂಟು ಬಿದ್ದಿದ್ದಾನೆ. ಅರ್ರೇ ನಾನು ಅಲ್ಲೇ ಇರುವುದು, ನೀವು ಏನೂ ಯೋಚನೆ ಮಾಡಬೇಡಿ, ’ಐ ವಿಲ್ಲ್ ಡ್ರಾಪ್ ಯೂ’ ಎಂದು ತಾನೇ ಈ ವ್ಯವಸ್ಥೆಯನ್ನು ಮನಸಾರೆ ಒಪ್ಪಿದ್ದೇನೆ ಎನ್ನುವಂತೆ ತನ್ನ ಅಭಿಪ್ರಾಯಕ್ಕೂ ಕೇಳದೇ ತನ್ಗಾಗಿ ಸೆಕ್ಟರ್ ಮೂವತ್ತೇಳರ ಪೆಟ್ರೋಲ್ ಬಂಕಿನೆದುರು ಮರುದಿನ ಕರಾರುವಾಕ್ಕಾಗಿ ಕಾಯುತ್ತಿದ್ದ. ಗಾಜಿಯಾಬಾದ್ ಬಸ್ಸಿನಿಂದ ಕೆಳಗಿಳಿಯುತ್ತಲೇ ಆತನ ಗಾಡಿ ಕಣ್ಣಿಗೆ ಬಿದ್ದು ಹಾಗೆ ನೋಡಿಯೂ ನೋಡದಂತೆ ದಾಟಿ ಹೋಗಬಹುದಿತ್ತು ಎಂದುಕೊಳ್ಳುತ್ತಾ , ಹಾಗೆ ಮಾಡಲು ಮನಸ್ಸು ಒಪ್ಪದೇ ಪೀಕೆನ ಕಾರಿನೆಡೆಗೆ ಯಾವುದೋ ಮೋಡಿಗೊಳಗಾದವಳಂತೆ ಕಾಲು ಹಾಕಿದ್ದಳು.
ಈ ಪೀಕೆ ತನಗೆ ಯಾವ ಸಂಬಂಧಿಕನೂ ಅಲ್ಲ, ಸಹೋದ್ಯೋಗಿಯೂ ಅಲ್ಲ, ಎರಡು ವರ್ಷದ ಹಿಂದೆ ಹಾಗೇ ಒಂದು ದಿನ ತನ್ನ ಬ್ಯಾಂಕ್ ಮ್ಯಾನೇಜರ್ ದೀಪಕ್ ಗುಪ್ತಾನ್ ಛೇಂಬರ್ನಲ್ಲಿ ಕಂಡದ್ದರ ನೆನಪು. ಒಂದೆರಡು ಸಲ ಗ್ಲಾಸ್ ಪೇನ್ ನಿಂದ ಕದ್ದು ಕ್ಯಾಶ ಕೌಂಟರನಲ್ಲಿದ್ದ ತನ್ನನ್ನು ನೋಡಿದ ನೆನಪು. ಇತ್ತೀಚೆಗೆ ಅವನ ಕಂಪನಿಗೆ ನಮ್ಮ ಬ್ಯಾಂಕು ಒಂದು ಕೋಟಿ ಹಣಸಹಾಯ ನೀಡಿದೆ. ದೀಪಕ ಗುಪ್ತಾ ಅವನಿಗೆ ಮೊದಲಿನಿಂದ ಮಿತ್ರನೋ, ಲೋನಿಗಾಗಿ ಈ ಮಿತ್ರತ್ವವೋ ದೇವರಿಗೆ ಗೊತ್ತು. ಈಗೀಗ ಅರ್ಧ ದಿನ ಆತ ನಮ್ಮ ಬ್ಯಾಂಕಿನ ನೌಕರನೇನೋ ಅನ್ನುವಂತೆ ಹೆಚ್ಚು ಸಮಯ ಕಳೆಯುತ್ತಿರುತ್ತಾನೆ. ಏ.ಜಿ.ಎಮ್. ಪ್ರಭುಶಂಕರ ದಯಾಲ್ ನ ಚೇಂಬರನ್ನು ತನ್ನದೇ ಆಫಿಸೇನೋ ಎಂಬಂತೆ ಬಳಸುತ್ತಾನೆ, ತನ್ನ ಲ್ಯಪ್ ಟಾಪ್ ತೆರೆದುಕೊಂಡು ಗಂಭೀರವಾಗಿ ಏನೋ ಲೆಕ್ಕಾಚಾರವನ್ನು ತಾಳೆನೋಡುತ್ತಿರುತ್ತಾನೆ. ಎಲ್ಲರೂ ನೋಡುತ್ತಿರುತ್ತಾರೆ ಯಾರಿಗೆ ಅನ್ನುವುದು. ದೊಡ್ಡವರ ವಿಷಯವಲ್ಲವೇ?
ದಿನಗಳೆದಂತೆ ಎಲ್ಲರ ಜತೆ ಹಾಯ್ , ಹಲೋಗಳ ವಿನಿಮಯವಾಗುತ್ತಿದ್ದವು. ತನ್ನೊಂದಿಗೂ ಹಲೋ ಹೇಳಿದ್ದಿದೆ. ತನಗೆ ಕತ್ತು ಎತ್ತಿ ಮಾತನಾಡಲು ಪುರುಸೊತ್ತಿದ್ದರೆ ತಾನೆ? ಎಲ್ಲೇ ಕಾಣಲಿ ಎಲ್ಲರನ್ನು ಬಿಟ್ಟು ವಿಶೇಷವಾಗಿ ತನ್ನನ್ನು ಕಂಡು ಮೆಲ್ಲಗೇ ಹಾಯ್ ಹೇಳಿ, ಮುಗುಳ್ನಗೆ ಸೂಸಿ ಹೋಗುತ್ತಿದ್ದ. . ಐವತ್ತರ ಅಂಚಿನಲ್ಲಿದ್ದ ಮುದಿಯ. ಸಲ್ಪ ರಷ್ಯ ಇಲ್ಲದೇ ಇದ್ದಾಗ ಟೀ ಬ್ರೇಕ್ನಲ್ಲಿ ಅವನೇ ಒಮ್ಮೆ ತನ್ನ ವಯಸ್ಸನ್ನು ಹೇಳಿ ತಾನಿನ್ನೂ ರಾಜ್ ಬಬ್ಬರ್ ಹಾಗೆ ಇದ್ದೇನಲ್ಲಾ ? ಎಂದು ಎಲ್ಲರೊಂದಿಗೆ ಕೊಚ್ಚಿಕೊಂಡಿದ್ದ. ಹೇಗೆ ತನ್ನ ಜತೆ ಕೇವಲ ಹಾಯ್, ಹಲೋದ ಏಳೆ ಹಿಡಿದು ಇಷ್ಟು ಹತ್ತಿರ ಬಂದ? ಅವನೇ ಹೇಳಿಕೊಳ್ಳುವಂತೆ ವಿ ಆರ್ ಫ್ರಂಡ್ಸ್ ಯಾರ್" ಹೇಗೆ ಪ್ಫ್ರೆಂಡ್ಸ್ ಅರ್ಥವಾಗುವುದಿಲ್ಲ. ಎಲ್ಲರನ್ನು ಬಿಟ್ಟು, ಎಲ್ಲವನ್ನೂ ಆಚೆಗೆ ಹಾಕಿ ತಾನೇ ಯಾಕೆ ಫ್ರೆಂಡ್ ಆಗ್ಬೇಕು? ಯಾವ ಸಾಮ್ಯತೆಯಿಂದ ? ವಯಸ್ಸಿನ ಸಾಮ್ಯತೆಯೋ, ಊರು ಕೇರಿಯ ನೆಂಟಸ್ತಿಕೆಯೋ, ಒಂದೇ ಕಡೆ ಓದಿದವರೋ ? ಯಾವ ಸಂಬಂಧದಿಂದ ತಾನು ಫ್ರೆಂಡ್ ಆಗಿಯೇನು? ತನಗೇನು ಅರ್ಥವಾಗುವುದಿಲ್ಲಾ ಅಂತ ತಿಳಿದ್ದಿದ್ದಾನಾ? ಅಷ್ಟು ಬುದ್ದೂ , ಪೆಕರನಂತೆ ಕಾಣ್ತೀನಾ? ಭಯವಾಯಿತು. ತನ್ನ ರೂಪಿನ ಬಗೆಗೆ, ಮಾದಕತೆಯ ಬಗೆಗೆ, ಮೌನದ ಬಗ್ಗೆ ತನ್ನ ಕಾಲೇಜಿನ ಬಂಡ್ಯಾ ಪದ್ಯ ಬರೆದು ಅದು ಇಂಗ್ಲೀಷ ಮೇಡಂ ಕೈಗೆ ಸಿಕ್ಕಿ ಫಜೀತಿಯಾಗಿದ್ದು, ಅಳು ಮುಖದಿಂದ ಕಣ್ಣೀರನ್ನು ಉಕ್ಕಿಸಿಕೊಂಡು ನಿಂತಿದ್ದ ದೀನವಾದ ಬಂಡ್ಯಾನ ಮುಖ ನೆನೆದು ಮೊದಲು ನಗು ಬರುತ್ತಿತ್ತು. ಈಗ ತನಗೂ ಅಳು ಬರುತ್ತದೆ. ’ಪಾಪ ಬಂಡ್ಯಾ’ ಎನಿಸಿ. ಇಲ್ಲಿ ಹೀಗೆ ಇಷ್ಟವಾಗದ ಒಬ್ಬ ವ್ಯಕ್ತಿಯೊಡನೆ ಸೂಪ್ ಕುಡಿಯುತ್ತೇನೆಂದು ಗೊತ್ತಿತ್ತಾ ತನಗೆ ? ಬ್ಯಾಂಕಿನ ಹಲವರು ಅವನು ತನಗೆ ಹಾಯ್ ಹೇಳಿದ್ದು ಕಂಡು -ಏಯ್ ಬೀನಾ ಮ್ಯಾಡಂ ಆಸಾಮಿ ಗಾಳ ಹಾಕ್ತಾ ಇದೆ’ ಹುಷಾರಾಗಿರು ಎಂದು ಮುಜುಗುರವಾಗುವಷ್ಟು ಎಚ್ಚರಿಕೆ ಕೊಟ್ಟಿದ್ದರು. ಛಳಿಯಲ್ಲೂ ಇದನ್ನು ಯೋಚಿಸಿ ಬೆವತು ಹೋದಳು. ಯಾಕೋ ತಪ್ಪು ಮಾಡುತ್ತಿದ್ದೆನೇಂಬ ಗಿಲ್ಟು ಕಾಡತೊಡಗಿತು.
ಯಾಕೆ ಪೀಕೆನಿಂದ ಲಿಫ್ಟ್ ತಗೋತೇನೆ? ಮುಂಬಾಯಿಯಲ್ಲಿ ಜನ ಗಾಡಿಯಿದ್ದವರು ಒಂದೇ ದಿಕ್ಕು, ಮಾರ್ಗದಲ್ಲಿ ಹೋಗುವವರು ಇನ್ನೊಬ್ಬರನ್ನು ಪಿಕ್ ಮಾಡ್ಕೊಂಡು ಹೋಗ್ತಾರಂತೆ ಎಂದು ಕೇಳಿದ್ದೇನೆ. ಅವರೂ ಇಂಥಾ ಸನ್ನಿವೇಶದಲ್ಲಿ ತೊಳಲಾಡುತ್ತಾರಾ? ಯಾರನ್ನಾದರೂ ಕೇಳಬೇಕು. ನೋಯ್ಡಾದಿಂದ ಇಲ್ಲಿ ದೆಹಲಿಯ ಸೌಥ ಎಕ್ಸ್ ಗೆ ಬರಬೇಕೆಂದರೆ ಸ್ವಂತ ಗಾಡಿಯ ಅಗತ್ಯವಿದೆ. ರಜನೀ ಗಂಧಾ ಚೌಕಿನಿಂದಾ ಸುಮಾರು ಕಾಲ್ ಸೆಂಟರಿನ ಕ್ಯಾಬ್ ಗಳಿವೆ ಮೂಲ್ ಚಂದ್ ಕಡೆ ಬರಲು ಆದರೆ ಹಿಡಿಯಲು ಸರ್ಕಸ್ ಮಾಡಲು ಇಷ್ಟವಿಲ್ಲ. ಇನ್ನು ಪ್ರೈವೇಟ್ ಬಸ್ಸುಗಳು ವಿಪರೀತ ರಷ್ಯು. ತನ್ನ ಓದುವ ಮಕ್ಕಳೂ, ವಯಸ್ಸಾದ ಅತ್ತೆಯ ಆರೈಕೆ, ಡಾಕ್ಟರ್ ಬಿಲ್ಲು, ಗಂಡನ ಸತತ ಅನಾರೋಗ್ಯ. ಆತ ಅನಾರೋಗ್ಯದಲ್ಲೂ ಕೆಲಸ ಮಾಡುತ್ತಿರುತ್ತಾನೆ. ಆತ ಸಿವಿಲ್ ಇಂಜಿನಿಯರ್, ಹೊರಗಡೆ ಸಿಕ್ಕಾಪಟ್ಟೆ ಕನ್ಸ್ಟ್ರಕ್ಷನ್ ಕೆಲಸ ನಡೆಯುತ್ತಿರುತ್ತದೆ ಯೂ.ಪಿ., ಗಾಜಿಯಾಬಾದ್, ಗುರಗಾಂವ್ ಹೀಗೆ. ಇನ್ನ್ಯಾರಾಗಿದ್ರೆ ಲಕ್ಷಗಟ್ಟಲೇ ಗಳಿಸುತ್ತಿದ್ದರು. ಆದರೆ ಅವಳ ಗಂಡನಿಗೆ ಅಸ್ತಮಾ ಅದೂ ಇದೂಂತ ವರ್ಷವಿಡೀ ದವಾಖಾನೆ ಔಷಧಿ ಇರುತ್ತದೆ. ಹೆಚ್ಚು ಉತ್ಸಾಹದಿಂದ ಗಳಿಸಲಾರದವನಾಗಿದ್ದಾನೆ. ಮನೆಯಲ್ಲೇ ಒಂದು ಆಫೀಸ್ ತೆಗೆಯೋಣ, ಇಲ್ಲೇ ಕೂತಲ್ಲೇ ನೀನು ಸಿವಿಲ್ ನಕ್ಷಗಳನ್ನು, ತಾಂತ್ರಿಕ ಸಲಹೆಗಳನ್ನು ನೀಡಿಯೇ ಗಳಿಸಬಹುದು ಎಂದು ಬೀನಾ ಹೇಳಿ ಸೋತಿದ್ದಾಳೆ. ಅವನು ಯಾರ ಮಾತನ್ನೂ ಕೇಳಲಾರದ ವ್ಯಕ್ತಿ. ಬೀನಾ ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ದಿನಾ ನೋಯ್ಡಾ ದೆಹಲಿ ಅಂತಾ ಒದ್ದಾಡುತ್ತಿದ್ದಾಳೆ. ಇದೇ ಕಾರಣಕ್ಕಾಗಿ ಅವಳು ನೋಯ್ಡಾದಿಂದಲೇ ಹೋಗಿ ಬರುವ ಪೀಕೆನ ಜತೆ ಅವನ ಕಾರಲ್ಲಿ ಬರತೊಡಗಿದ್ದು. ಇತ್ತೀಚೆಗೆ ದೀಪಕ್ ಗುಪ್ತಾ ತನ್ನ ವರ್ಗಾವಣೆಯ ಅಹವಾಲನ್ನು ಸೀರಿಯಸ್ಸಾಗಿ ತಗೊಳ್ಳುತ್ತಿಲ್ಲ. ಸೂಪ್ ಹೀರುತ್ತಾ ವರ್ಗಾವಣೆಯ ಯೋಚನೆ ತಲೆಯಲ್ಲಿ ಮಿಂಚುತ್ತಲೇ ಸಾವಿರ ಓಲ್ಟಿನ ಲ್ಯಾಂಪ್ ಹತ್ತಿಕೊಂಡಂತಾಯ್ತು. ದೀಪಕ ಗುಪ್ತಾಗೆ ಹೇಳಿ ಇವನೇ ಆ ಕಾರ್ಯಕ್ಕೆ ಅಡ್ಡಿ ಮಾಡುತ್ತಿರಬಹುದಾ ಎಂಬ ಸಂಶಯವೂ ಬೆನ್ನಲ್ಲಿ ಹರಿಡಾಡಿದಂತಾಗಿ ಛಳಿ ಎನಿಸಿ ಪೀಕೆನ ದೊಗಲೆ ದೊಗಲೆ ಮುಖ, ಪೊದೆ ಪೊದೆ ಹುಬ್ಬು ಅಸಹ್ಯವಾಗಿ ಕಾಣತೊಡಗಿತು. ಅವನು ಒತ್ತಾಯದಿಂದ ನೀಡಿದ, ತಾನಿನ್ನೂ ಬಳಸಿರದ ಚಿಕ್ಕ ಪುಟ್ಟ ಗಿಫ್ಟಗಳು, ತನ್ನ ಪರ್ಸಿನಲಿದ್ದ ಆತ ಮೊನ್ನೆ ನೀಡಿದ ಲಿಪ್ ಸ್ಟಿಕ್ ಎತ್ತಿ ಬಿಸಾಡುವಷ್ಟು ಮಣಭಾರವೆನಿಸ್ತೊಡಗಿತು.
ಸೂಪ್ ಕುಡಿದು ಮುಗಿಸಿ, ’ ಹೊರಡೋಣವಾ ಸರ್ ? ಎಂದು ಎದ್ದೇ ಬಿಟ್ಟ ಬೀನಾಳನ್ನು ವಿಧಿಯಿಲ್ಲದೇ ಹಿಂಬಾಲಿಸಿದ ಪೀಕೆ, ಕಾರಿನಲ್ಲಿ ಕೂರುತ್ತಲೇ ಹೌ ವಾಸ್ ಸೂಪ್ ? ಯೂ ಲೈಕ್ ಇಟ್ ನಾ ? ನಿನಗಿಷ್ಟವಾಗಿದ್ದಕ್ಕೇ ನಾನು ಆರ್ಡರ್ ಮಾಡಿದೆಯೆನ್ನುವ ರೀತಿಯಲ್ಲಿ ನಕ್ಕ. ಅವಳೂ ಒತ್ತಾಯದ ನಗು ನಕ್ಕರೂ ಒಳಗೆಲ್ಲೋ ಏನೋ ಒಂದು ತರಹದ ದಿಗಿಲು, ಗೋಜಲು. ಎಲ್ಲೋ ಎನೋ ತಪ್ಪು ಮಾಡುತ್ತಿದ್ದೇನೆ ಎನ್ನುವ ಅಳುಕು. ಏನು ಮಾಡುವುದು ದಿನಾ ಬಸ್ಸಿನಲ್ಲಿ ನೇತಾಡಿಕೊಂಡು ಬರುವುದಕ್ಕಿಂತ ಆರಾಮವಾಗಿ ಕಾರನಲ್ಲಿ ಬರಬಹುದು ಎಂದುಕೊಂಡಿದ್ದ ಮನಸ್ಸು ಅದು ತಪ್ಪು ಎಂದು ವಾದಿಸತೊಡಗಿದೆ. ಇಷ್ಟು ದೊಡ್ಡವ್ಯಕ್ತಿಗೆ ದುಡ್ಡು ತಗೊಳ್ಳಿ ಅಂತಾ ಹೇಳಿ ಅಪಮಾನಿಸುವುದಕ್ಕಿಂತ ತಾನೇ ತನ್ನ ದಾರಿ ಹುಡುಕಿಕೊಳ್ಳಬೇಕು ಎಂದುಕೊಂಡಳು. ಹೀಗೇ ದಿನಾ ಅಂದುಕೊಳ್ಳುತ್ತಾಳೆ. ಕಾರ್ಯರೂಪಕ್ಕೆ ತರಲು ಅವಳಿರುವ ಸಂಧರ್ಭ, ಕೆಲಸ ಮತ್ತು ಮನೆಯ ಒತ್ತಡಗಳು ಯೋಚನೆಗೆ ಮುಸುಕೆಳೆಯುತ್ತಿವೆ. ಪೀಕೆ ಸುಮ್ಮನೆ ಗಾಡಿ ನಡೆಸುತ್ತಿದ್ದ, ಇವಳ ಮೌನ ಕಂಡೋ ಎನೋ ಪೀಕೆನ ದಪ್ಪ ಕೈ ಅವಳ ಬಲಗೈಯನ್ನು ಹಿಡಿಯಿತು, ಬೀನಾ ಸರಕ್ಕನೇ ಹಿಂತೆಗೆದುಕೊಂಡಳು. ’ಕ್ಯುಂ ಬೇಬಿ, ಎಷ್ಟು ಚೆಂದದ ಹವೆ ಇದೆ, ಪಕ್ಕದಲ್ಲಿ ಇಷ್ಟು ಚೆಂದದ ನೀನಿದ್ದಿ’ ಏನೇನೋ ಬಡಬಡಿಸುತ್ತಿದ್ದ ಪೀಕೆ. ಸಿಟ್ಟು, ಕೋಪ, ವಿಭ್ರಮೆಯಲ್ಲಿ ಕಿವಿಯೆಲ್ಲ ಕಾದು ಮಂದವಾಗತೊಡಗಿತು, ಏನೂ ಕೇಳಿಸದಂತೆ ಶೂನ್ಯತೆ, ಎಲ್ಲಾ ಸ್ತಬ್ದವಾದಂತೆ. ಇದನ್ನು ಅವಳ ಸಂಶಯಾಗ್ರಸ್ತ ಮನ ಬಹು ದಿನಗಳಿಂದಲೇ ಹೀಗಾಗಬಹುದು, ಆಗದಿರಲಿ ದೇವರೇ ಎಂದು ನಿರೀಕ್ಷಿಸುತ್ತಿತ್ತು. ಮೂಲಚಂದ ಕ್ರಾಸ್ ಮಾಡುತ್ತಲೇ ಸೌಥ್ ಎಕ್ಸ ನ ಭವ್ಯ ಕಟ್ಟಡಗಳು, ದೂರದ ತನ್ನ ಬ್ಯಾಂಕಿನ ಬಿಲ್ಡಿಂಗ್ ಕಾಣತೊಡಗಿದವು. ಹೋದ ಜೀವ ಬಂದಂತೆ ಇಲ್ಲಿಯೇ ನಿಲ್ಲಿಸಿಬಿಡಿ ಪೀಕೆ ಜೀ ಎಂದವಳಿಗೆ ತಾನು ಮಾತನಾಡಿದ್ದಕ್ಕಿಂತ ಹೆಚ್ಚು ಚೀರಿದಂತೆನಿಸಿ ಮುಜುಗರವಾಯಿತು. ಹೊರಗೆ ಕಾಲಿಡುತ್ತಲೇ ನಿರಾಳವೆನಿಸಿ, ಶ್ವಚ್ಛ ಹವೆಗೆ ಮುಖವೊಡ್ಡಿ ಉಸಿರೆಳುದೊಂಡು ತುಸು ಹೊತ್ತಿನ ಮುಂಚೆ ಕುಡಿದ ಸೂಪ್ ಹೊಟ್ಟೆಯಲ್ಲಿ ಮಳಮಳಿಸಿದಂತಾಗಿ ಕಣ್ಣೂ ಕತ್ತಲಿಟ್ಟು ಬಂದಂತಾಗಿ ದುಡು ದುಡು ಬ್ಯಾಂಕಿನ ಕಡೆಗೆ ಹೆಜ್ಜೆ ಹಾಕತೊಡಗಿದಳು ಎದೆಯೊಳಗೆ ಮಾತ್ರ ಎಂದೂ ಇಲ್ಲದ ನಿರುಮ್ಮಳತೆಯಿಂದಾ. ಹನಿಗೂಡಿದ ಕಣ್ಣುಗಳಲ್ಲಿ ಆಗ ತಾನೆ ಮೂಡಿದ ಪೇಯಿಂಟಿಂಗ್ ನಂಥಾ ಪರಿಸರ ದೃಶ್ಯ ಪ್ರತಿಫಲಿಸುತ್ತಿತ್ತು.

Friday, January 18, 2008

ಕಾಲ ಬದಲಾಗುತ್ತದೆ



ಹೌದು, ಕಾಲ ಬದಲಾಗುತ್ತದೆ



ಆಗುತ್ತಲೇ ಇರುತ್ತದೆ



ಯಾರ ಹಂಗೂ ಇಲ್ಲದೇ




ಯಾರ ಕಾಯುವಿಕೆಗೂ ದಾಖಲಾಗದೇ




ಅನಂತತೆಯಲ್ಲಿ



ಕಾಲದ ಪರೀಧಿಯೊಳಗಿನ



ವರ್ತುಲದಂತೆ.








ನೀನು ಬದಲಾಗಲಾರೆ



ಅಂತೆ ಕಂತೆಗಳೆಲ್ಲ ಹುಸಿಯಾದವು



ಎಷ್ಟು ಬದಲಾಗಿ ಬಿಟ್ಟೆ ಗೆಳೆಯ



ನನ್ನ ಅಳಲು ನಿನ್ನ ತಟ್ಟಲಿಲ್ಲ



ನನ್ನ ಕನಲು ನಿನ್ನ ಕರಗಿಸಲಿಲ್ಲ.





ಏನೆಲ್ಲ ಕನಸುಗಳ ಚುಕ್ಕೆಗಳನ್ನಿಟ್ಟಿದ್ದೆ



ನೀಲಿಯಗಸದ ತುಂಬೆಲ್ಲ ನಿನ್ನ ನಗು



ಬೆಳದಿಂಗಳುಕ್ಕಿಸುವ ತಂಪಿನಲ್ಲಿ



ನಿನ್ನ ದನಿಯನಷ್ಟೇ ಆಲಿಸಿದ್ದೇ



ನನ್ನ ದನಿಗೆ ಕೊರಳಾಗಲಿಲ್ಲ ನೀನು






ನಿನಗೆ ನಿನ್ನದೇ ಜಂಜಾಟ ನೂರು



ಕನಸುಗಳಾಗಿವೆ ಸಾವಿರ ಚೂರು



ಯಾವ ನಾಳೆಗಳಿಗೆ ಕಾಯಲಿ ಇನ್ನು



ನೀನೆಲ್ಲೋ ನಾನೆಲ್ಲೋ ಬದುಕೆಣಿಸಿದತ್ತ



ಹಾದಿ ಬೇರೆಯಾಗುವ ಕಾಲ ಕಾದಿದೆಯೇನೋ



ಬರುವ ಸುದಿನವ ಎಣಿಸಿ ಕೂರುವ ಕತ್ತಲಲ್ಲಿ



ಆ ಚಂದಿರ ಮೂಡುವನೋ ಈ ರಾತ್ರಿಗೆ



ಕಣ್ಣಾಗಿ ಮುಗಿಲಿಗೆ ಹಗಲಾಗಿ.

ಕಪ್ಪ್ಯೂಚಿನೋ ಮತ್ತು ಮನಸ್ಸಿಲ್ಲದ ಮನಸ್ಸು

ಇವತ್ತು ಯಾವುದರಲ್ಲೂ ಮನಸ್ಸೇ ಹತ್ತುತ್ತಿಲ್ಲ, ಮನಸ್ಸೆಲ್ಲ ಕಲಸು ಮೇಲೋಗರವಾಗಿದೆ. ಊಟ ತಿಂಡಿ ಇತ್ಯಾದಿಗಳೂ ಬೇಡವೆನ್ನಿಸುವಷ್ಟು. ಕೆಲವೊಮ್ಮೆ ಅರ್ಥವೇ ಆಗುವುದಿಲ್ಲ ನಮ್ಮವರೆನ್ನುವ ಜನ ನಮ್ಮಿಂದ ಎನು ಬಯಸುತ್ತಾರೆ. ಬೇರೆಯವರು ಹೋಗಲಿ ಮನೆಯಲ್ಲಿನ ಗಂಡನೇ ಅವಳು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಅಂತಾ ತನ್ನ ಕೋಲಿಗ್ಸ್ ಹತ್ತಿರ ಹೇಳಿಕೊಂಡ್ರೆ ಹೆಣ್ಣಾಗಿ, ಹೆಂಡತಿ ಎಂಬ ನಾಮಫಲಕದಲ್ಲಿ ಜೀವನ ಸವೆಸಿ ಇಂಥ ಪುರಸ್ಕಾರ ದೊರೆತರೆ ಏನು ಮಾದುವುದು. ಬೆಳಿಗ್ಗೆ ಆಫಿಸಿನಲ್ಲಿ ಕುಳಿತು ಕೊಳಗಳಂಥಾ ಕಣ್ಣುಗಳಲ್ಲಿ ನೀರು ತುಂಬಿ ಕುಳಿತವಳಿಗೆ ಶೋಭಾನಾ ಮಾತನಾಡಿಸಿದ್ದೇ ಸಾಕಾಯಿತು ದಳ ದಳನೇ ಅಳತೊಡಗಿದಳು. ಹೆಣ್ಣು ಜೀವವೇ ಇಷ್ಟು. ಮನಸ್ಸಿಗೆ ಹಚ್ಚಿಕೊಂಡವ ತನಗೆ ಏನೂ ಹಚ್ಚಿಕೊಂಡಿಲ್ಲ ಎನ್ನುವ ರೀತಿ ವ್ಯವಹರಿಸುತ್ತಾನೆ. ಅತ್ತ ತನ್ನನ್ನು ಬಿಡಲೂ ಆರ ಇತ್ತ ತನ್ನನ್ನು ಚೆನ್ನಾಗಿ ಕಾಳಜೀಪೂರ್ವಕವಾಗಿ ನಡೆದುಕೊಳ್ಳಲೂ ಆರ. ಅಥವಾ ತಾನೇ ಅವನನ್ನು ಅಷ್ಟು ಹಚ್ಚಿಕೊಂಡು ಒದ್ದಾಡುತ್ತಿದ್ದಾಳೆ ಎನಿಸುತ್ತದೆ. ಆತ ಖಂಡಿತವಾಗಿಯೂ ತನ್ನನ್ನು ಹಚ್ಚಿಕೊಂಡಿಲ್ಲ ಅಷ್ಟಾಗಿ. ಇಲ್ಲಾಂದರೆ ಅವನೂ ಸ್ಪಂದಿಸುತ್ತಿದ್ದ ತನ್ನ ನೋವಿಗಳೊಂದಿಗೆ. ಥೂ ಎಂದು ಜೀವ ನೊಂದು ಹೋಗಿದೆ, ದಿನಾ ದಿನಾ ಸಾಯುವುದಕ್ಕಿಂತ ಒಮ್ಮೆಲೇ ಸಾಯುವುದು ಲೇಸು. ಹಾಗಂತ ಆತ್ಮಹತ್ಯೆ ಮಾಡಿಕೊಳ್ಳುವಷ್ಟೂ ತಾನು ಸೋತಿಲ್ಲ. ತನಗೆ ಯಾವ ಗಂಡಸಿನ ಆಸರೆಯೂ ಬೇಕಿಲ್ಲ ಒಬ್ಬಳೇ ಬದುಕಬಹುದು ಎನಿಸಿ ತುಸುಮಟ್ಟಿಗೆ ಸಮಾಧಾನವಸಿದರೂ ಬೇರೆನೋ ಏನೋ ಯೋಚಿಸಿದರೆ ಅದಕ್ಕೂ ಯಾವ ದಾರಿಯೂ ತೋಚುತ್ತಿಲ್ಲ. ಹಾಳು ಮನಸ್ಸು.
ಬ್ರೆಡ್ ಆಂಡ್ ಮೋರ್ ರೆಸ್ಟುರಾ ದಲ್ಲಿ ಕಪ್ಪ್ಯೂಚಿನೋ ಕಪ್ ತುಂಬ ನೊರೆ ನೊರೆಯಾಗಿ ಇಟ್ಟುಕೊಂಡು ಮನಸ್ಸನ್ನು ಕೆಡಿಸುವ, ದಿನವನ್ನು ಹಾಳುಮಾಡುವ ಯಾವ ಯೋಚನೆಗಳೂ ಕಾಡದಂತೆ ಮನಸ್ಸನ್ನು ಶಾಂತಗೊಳಿಸುತ್ತಾ, ಎದುರಿಗೆ ಘಮಘಮಿಸುವ, ಇಡೀ ದಿನದ ರುಚಿಯನ್ನೂ, ಸಾರವನ್ನೂ ತನ್ನಲ್ಲೇ ಬಚ್ಚಿಟ್ಟುಕೊಂಡಂತಾ, ಹೊರಗಿನ ಛಳಿಯನ್ನೂ, ಟೆಂಪರೇಚರನ್ನೂ ನೆನೆಯದೇ ಬರೀ ಕಾಯುತ್ತಾ ಕುಳಿತಿರುವ ಬಿಸಿ ಬಿಸಿ ಕಪ್ಪ್ಯೂಚಿನೋ ಹೀರುತ್ತಾ ಹೀರುತ್ತಾ ಎಷ್ಟು ಹಿತವಾಯಿತೆಂದರೆ, ಮನಸ್ಸೆಲ್ಲಾ ಹಿತವನ್ನೂ ಬೆಚ್ಚಗಿನ ಭಾವವನ್ನು ತುಂಬಿಕೊಂಡಂತೆ,ಚೇತೋಹಾರಿಯಾಗಿತ್ತು. ಬಹುಶಃ ಸ್ವಲ್ಪ ಹೊತ್ತಿನ ಮುಂಚೆ ಅವನು ಹೇಳಿದ ಮಾತುಗಳು ಎಲ್ಲಿಲ್ಲದ ಸಂತೋಷವನ್ನು, ಕೇಳಿದ ಕರಣಗಳಿಗೆ, ಮನಸ್ಸಿಗೂ ಸಮಾಧಾನವನ್ನು ನೀಡಿದ್ದವು. ’ಏನು ಗಳಿಸಬೇಕಂದರೆ ನಾನು ಕೋಟಿಗಟ್ಟಲೇ ಗಳಿಸಬಹುದು, ಆದರೆ ನಿನ್ನೊಂದಿಗೆ ಹೀಗೆ ಕಪ್ಪ್ಯುಚೀನೋ ಕುಡಿಯುವ, ನೀನು ಅನನ್ಯತೆಯಲ್ಲಿ ಕಾಫಿಯನ್ನು ಆನಂದಿಸುತ್ತಾ ನಿನ್ನ ಕಣ್ಣಿನಲ್ಲಿ ಜಿನುಗುವ ಖುಶಿಯನ್ನು ಕಾಣುವ ಕಂಡು ಖುಶಿ ಪಡುವ ಕ್ಷಣಗಳನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ’ ನನ್ಗೇನಿದೆಯೋ ಅದರಲ್ಲೇ ನಾನು ಸಂತೃಪ್ತ ಎನ್ನುವ ಅವನ ಮಾತುಗಳು ಸವಿಯಾದ ಕಪ್ಪ್ಯೂಚಿನೋದಕ್ಕಿಂತ ರುಚಿಯಾಗಿದ್ದವೆನ್ನಬಹುದಿತ್ತು. ಖಂಡಿತವಾಗಿಯೂ ಅವು ನಾಟಕೀಯತೆಯಲ್ಲಿ ಆಡಿದ ಮಾತುಗಳಾಗಿರಲಿಲ್ಲ, ಅವಳು ಮನಸ್ಸಿನಲ್ಲಿ ನೂರುಬಾರಿ ಹೇಳಿಕೊಂಡಳು.

ಎಲ್ಲರೂ ಕೆಟ್ಟವರಿರುವುದಿಲ್ಲ, ಒಳ್ಳೆಯವರೂ ಇದ್ದಾರೆ ಲೋಕದಲ್ಲಿ. ಬರೀ ದುಡ್ಡು ದುಡ್ಡು ಅಂತಾ ಸಂಬಂಧಗಳನ್ನು ಅಲಕ್ಷಿಸುವ, ಸಮಯವಿರದವರಲ್ಲಿ ಅಂತಕರಣವನ್ನು ಯಾಚಿಸುತ್ತಾ ಬದುಕುವುದಕ್ಕಿಂತ ಹೀಗೆ ಇದ್ದುದರಲ್ಲೇ ನಾನು ಸಂತೃಪ್ತನಾಗಿದ್ದೇನೆ ಎನ್ನುವ ವ್ಯಕ್ತಿಯ ಜತೆ ಕೆಲಕಾಲ ಕಾಫಿ ಕುಡಿಯುತ್ತಾ ಮತ್ತೆ ಇಂಥ ಯೋಚನೆಯ ಗಂಡಸು ಒಬ್ಬನಾದರೂ ಇದ್ದಾನಲ್ಲಾ ಎಂದು ಮನಸ್ಸು ತಿಳಿಯಾಗಿ ಹಾಗೇ ತಿಳಿನಗು ಮುಖದ ಮೇಲೆಲ್ಲಾ ಹರಡುವುದನ್ನೂ, ಆ ನಗುವಿನಲ್ಲಿ ಕರಗುತ್ತಾ ಕಪ್ಪುಚೀನೋವನ್ನೂ ತನ್ನ ನಗುವನ್ನೂ ಒಟ್ಟಿಗೇ ಹೀರುವ ಅವನ ಕಣ್ಣುಗಳನ್ನೂ ನೋಡುತ್ತಾ ಹಾಗೇ ಕುಳಿತುಬಿಟ್ಟಳು ಮನಸ್ಸನ್ನೂ , ಬೆಳಗಿನ ಕಣ್ಣಿರನ್ನೂ , ಬೈಗಳನ್ನೂ ಮರೆಯುತ್ತಾ.

Wednesday, January 16, 2008

ಮೋಡ ಮುಸುಕಿದ ಮುಂಜಾವು

ಇವತ್ತು ಬೆಳಿಗಿನ ವಾಕ್ ಹೋದಾಗ ಇರದ ದುಗುಡ ಆಮೇಲೆ ಸೂರ್ಯೋದಯ ಕಾಣದೇ ಮೋಡ ಮುಸುಕಿದ ಬೆಳಗನ್ನು ನೋಡುತ್ತಾ ಆಚೀಚೆ ಮೋಡ ಸರಿದಾಗ ಶಾಂತವಾಗಿ ಉರಿಯುವ ದೀಪದಂತೆ ಬೆಳಗುವ ಸೂರ್ಯನನ್ನು ನೋಡುತ್ತಾ, ಯಾವುದೇ ಕಾರಣವಿರಲಿ ಆಫಿಸಿಗೆ ಹೋಗಲೇ ಬೇಕಾದ ಅನಿವಾರ್ಯತೆಯನ್ನು ನೆನೆಯುತ್ತಾ ಬಾಲ್ಕನಿಯಲ್ಲಿ ನಿಂತು ತಲೆ ಬಾಚಿಕೊಳ್ಳುತ್ತಿದ್ದೆ. ದಿನವೂ ಒಬ್ಬ ಹೊಸ ಸೂರ್ಯ ಹುಟ್ಟುವುದಿಲ್ಲ, ಆದರೆ ಪ್ರತಿ ದಿನವೂ ನೂತನವಾಗಿರುತ್ತದೆ. ಹೊಸ ಲವಲವಿಕೆಯಿಂದ ತುಂಬಿರುತ್ತದೆ. ದಿನಾ ಘಟಿಸುವ ಘಟನೆಗಳು ಕೂಡ ಹೊಸವಾಗಿ, ನಿನ್ನೆ ಮತ್ತು ಇಂದಿನ ತಾಕಲಾಟದಲ್ಲಿ ನಿನ್ನೆಯಿಲ್ಲದ ಬೆರಗಿನಿಂದಲೋ, ಕಳವಳದಿಂದಲೋ ತುಂಬಿಕೊಂಡು ಕಾದಿರುತ್ತದೆ. ಸಮಯ ಮಾತ್ರ ಓಡುತ್ತಿದೆ ನಾವು ನಿಂತಲ್ಲೇ ನಿಂತು ಭವಿಷ್ಯದ ಯೋಜನೆಗಳನ್ನು ರೂಪಿಸುತ್ತಲೋ, ಆಗಲೇ ರೂಪಿಸಿದವುಗಳಲ್ಲಿ ಇನ್ನೂ ಸುಮಾರು ಕಾರ್ಯರೂಪಕ್ಕೆ ಇಳಿಯದೇ ಯಾವುದಕ್ಕೋ ಸುಮೂಹೂರ್ತಕ್ಕೆ ಕಾಯುತ್ತಿರುವಂತೆ, ಈ ಕಾಯುವ ಕಾಲ ಸುದೀರ್ಘವೆನಿಸುತ್ತದೆ.
ವರ್ತಮಾನದಲ್ಲಿದ್ದು ಕೊಂಡು ಭವಿಷ್ಯ್ದ ಬಗ್ಗೆ ಯೋಚಿಸುವುದು ಸಹಜವಾದುದು, ಕೆಲವರು ಯೋಚಿಸಿಸುವುದಿಲ್ಲ, ದೇವರ ಮೇಲೆ ಭಾರ ಹಾಕಿ ಯಾವ ಟೆನ್ಷನ್ ತಗೊಳ್ಳದೇ ಆರಾಮವಾಗಿ ಇರುವವರದು ಒಂದು ಗುಂಪಾದರೆ. ಬರೀ ದೇವರನ್ನು ನಂಬಿ ಯಾವ ಕಾಯಕವನ್ನೂ ಮಾಡದಿದ್ದರೇ ದೇವರು ಹೇಗೆ ಖುದ್ದಾಗಿ ಬಂದು ನಮ್ಮನ್ನು ಕೈ ಹಿಡಿದು ನಡೆಸ ಬಲ್ಲ? ಆದ್ದರಿಂದ ನಮ್ಮ ಪ್ರಯತ್ನ ಮಾಡ್ತಾ ಇರೋದು ನಮ್ಮ ಧರ್ಮ, ಮಾಡ್ತಾ ಇರೋಣ. ಬಾಕಿ ಅವನಿಚ್ಛೆ ಅಂದುಕೊಂಡು ತೆಪ್ಪಗಿರುತ್ತಾರೆ. ನಾನು ನೋಡಿ ಇನ್ನೂ ಮೂರು ತಿಂಗಳ ನಂತರ ಘಟಿಸಬೇಕಾದ ಒಂಡು ಘಟನೆಯ ರೂಪವನ್ನು ಕಣ್ಣಲ್ಲಿ ತುಂಬಿಕೊಂಡು, ಅದರ ಬಣ್ಣಗಳಲ್ಲಿ ಕನಸುಗಳನ್ನು ಅದ್ದುತ್ತಾ, ಹೃದಯದಲ್ಲಿ ಸಾವಿರ ಸುಮಧುರ ಕ್ಷಣಗಳನ್ನು ತುಂಬಿಕೊಳ್ಳುತ್ತಾ, ನಾಳೆಗಳನ್ನು ಕಟ್ಟಿಕೊಂಡಿದ್ದೇನೆಂದರೆ ಕೇಳಿದವರಿಗೆ, ಓದಿದವರಿಗೆ ಏನು ಅನಿಸಬಹುದು ? ನಾನೇಕೆ ಇಷ್ಟು ಸೆಂಟೀ? ಹೆಚ್ಚಾಗಿ ಭಾವುಕ ಜೀವಿಗಳೇ ಹೆಚ್ಚು ನೋಯುವವರು. ಜೀವನವನ್ನು ದುರ್ಭರವೆನಿಸಿಕೊಳ್ಳುವ ಹಾಗೆ ಮಾಡುವರು ಎನಿಸುತ್ತದೆ. ಏನೋ ಆದರೆ ಕೆಲವೊಮ್ಮೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ, ತಾನೇಕೆ ಇಷ್ಟು ಸೆಂಟಿಮೆಂಟಲ್ಲು ಅಂತಾ. ಇವತ್ತಿನ ಜಾಯಮಾನದಲ್ಲಿ ಯಾವ ಭಾವನಾತ್ಮಕ ಸಂಬಂಧಗಳು ಬರೀ ಭಾವನೆಗಳ ಸ್ಪಂದನದಲ್ಲೇ ರೂಪಗೊಂಡು ಅನುರೂಪವಾಗಿ ನಡೆಯಬಲ್ಲವೆಂದು ಯಾರೂ ಒಪ್ಪಿಕೊಳ್ಳುವುದಿಲ್ಲ. ಮನಸ್ಸೆ ಹೀಗೆ, ಯಾರ ಮಾತನ್ನೂ ಕೇಳುವುದಿಲ್ಲ ಅದು ಮರ್ಕಟದಂತೆ ಚಂಚಲ.
ಹೀಗೆ ಯೋಚಿಸಿದಷ್ಟೂ ಈ ಮೋಡ ಕವಿದ ದಿನಾ ಅಸಹ್ಯವಾಗತೊಡಗುತ್ತದೆ, ಸಣ್ಣಗೆ ಛಳಿಯ ಅನುಭವ ಮನಸ್ಸನ್ನು ಆವರಿಸುತ್ತ ಬೆಳಿಗ್ಗೆ ನೆಸ್ಕೆಫೆ ಹೀರುತ್ತಾ ಬೇಡದ ಮಾತುಗಳಿಗೆ ಕಿವಿಗೊಡುತ್ತಾ ಕುಳಿತಿದ್ದೆ ಈ ಕ್ಷಣಗಳು ಕೂಡಾ ಯಾವ ದಾಖಲೆಯನ್ನು ನಿರ್ಮಿಸಲಾರವು, ನೆನಪಲ್ಲಿ ಬರೀ ಕಾಫೀ, ಹೊರಗಿನ ಕವ್ವನೇ ಕವಿದ ಮೋಡ, ಎದುರಿನ ಜಿಲ್ಲಾ ಪಾರ್ಕಿನಲ್ಲಿ ಅರಳಿ ನಗುವ ಬಣ್ನ ಬಣ್ಣದ ಛಳೀಗಾಲದ ಹೂಗಳು ಇಬ್ಬನಿ ಬಿಂದುಗಳನ್ನು ಹೊದ್ದುಕೊಂಡು ಹಗಲು ಮೇಲೇರಿ ಬರಬಹುದಾದ ಸೂರ್ಯನನ್ನು ಕಾಯುವ ರೀತಿಗೆ ನನ್ನೊಳಗೂ ಕಾಫಿಯ ಸ್ವಾದದೊಂದಿಗೆ ಖುಶಿ ಬೆರೆತು ಸಣ್ಣಗೆ ಹನಿಯತೊಡಗಿತು ಮುದದಿಂದ.

Tuesday, January 15, 2008

ಗೌರವರ್ಣದ ಬಿಸಿಲನ್ನು ಕಾಸಿವುದೆಂದರೆ ಎಷ್ಟು ಮಜಾ


ಮಾತಿನಲ್ಲಿನ ಮೌನವನ್ನು,
ಶಬ್ದದಲ್ಲಿನ ನಾದವನ್ನು
ಕೊಂಬೆ ಮೇಲಿನ ಚಿಗುರನ್ನು
ಚಿಗುರು ಬೆರೆಗಿನ ಎಲೆಯನ್ನು
ನೀಲಿ ಆಕಾಶದ ಅನಂತತೆಯನ್ನು
ಮೀರಿದ ಬದುಕು ಅನನ್ಯವಾದುದು.

ಮನವ ತಟ್ಟಿದ ವಚನ -

ಗಾಣದಲ್ಲಿ ಸಿಲುಕಿದ ಎಳ್ಳು
ನೋಯದೆ ಎಣ್ಣೆಯ ಬಿಡುವುದೆ
ಕಾಯದಲ್ಲಿ ಸಿಲುಕಿದ ಜೀವ
ನೋಯದೆ ಕರಣಂಗಳ ಬಿಡುವನೆ
ಭಾವದಲ್ಲಿ ಸಿಲುಕಿದ ಭ್ರಮೆ
ನೋಯದೆ ವಿಕಾರವ ಬಿಡುವುದೆ
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ

ವೇದ ಎಂದರೆ ಜ್ಞಾನವಂತೆ. ವೇದನೆ ಎಂದರೆ ನೋವು. ನೋಯದೆ ಜ್ಞಾನವಿಲ್ಲ.

ಭಾವಗಳು ಭ್ರಮೆಗೆ ಕಾರಣ. ನಮಗೆ ಇಷ್ಟವಾದದ್ದು, ಪ್ರಿಯವಾದದ್ದು, ಅವು ಮಾತ್ರವೇ ಒಳ್ಳೆಯದು ಎಂದು ತಿಳಿಯುವುದು, ಅವನ್ನೇ ಆಶಿಸುವುದು, ಹೊಂದಲು ಬಯಸುವುದು ಇವೆಲ್ಲ ಸಹಜವೆಂದು ತೋರಿದರೂ ನಿಜವಾಗಿ ಭ್ರಮೆಗಳೇ. ಭ್ರಮೆಗಳು ಹುಟ್ಟುವುದೇ ಇಷ್ಟ, ಇಷ್ಟವಿಲ್ಲ, ಬೇಕು, ಬೇಡ, ಇತ್ಯಾದಿ ಭಾವಗಳಿಂದ. ನೋವಿನಿಂದ ಮಾತ್ರವೇ ಇಂಥ ಭ್ರಮೆ ಇಲ್ಲವಾಗುವುದು. ನೋವನ್ನು ತಿಳಿಯದಿದ್ದರೆ ಜ್ಞಾನದ ಲೇಪ ಇಲ್ಲ. ಲೇಪ ಅಂದರೆ ಮುಲಾಮು ಕೂಡ ಹೌದು. ನೋವಿಗೆ ಔಷಧ ತಿಳಿವಳಿಕೆಯೊಂದೇ.
*********************************

ಇಂದು ಇದು ಅತೀವವಾಗಿ ಮನವನ್ನು ಎಚ್ಚರಿಸಿದ ವಚನ ನಾನು ಕೆಂಡಸಂಪಿಗೆಯಲ್ಲಿ ಓದಿದ್ದು. ಓದಿದ್ದನ್ನು ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಲು , ಒರೆ ಹಚ್ಚಿ ನೋಡಿಕೊಳ್ಳಲು, ಮನಸ್ಸಿಗೆ ಹಿಡಿದ ಭ್ರಮೆಯಲ್ಲಿ ನೊಂದು ಈಗ ಭ್ರಮೆಯೆಂಬ ವಿಕಾರವನ್ನು ತೊಡೆದೆನೆಂಬ ಸಮಾಧಾನಕ್ಕಾಗಿ ಕಾಯುತ್ತಿದ್ದೇನೆ.