ಕನಸಿನೊಳಗೊಂದು ಕಣಸು
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"
"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"
"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"
"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?
"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"
"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"
"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"
"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"
"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"
"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"
"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"
"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"
"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?
"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"
"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ
"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"
"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು
2 comments:
ರೇಣುಕಾ ಅವರೇ,
ಪ್ರವೀಣನ ಬ್ಲಾಗ್ ನಿಂದ ನಿಮ್ಮಲ್ಲಿಗೆ ಬಂದೆ. ಬರಹ ಶೈಲಿ ಚೆನ್ನಾಗಿದೆ. ಎಲ್ಲಾ ಪೋಸ್ಟ್ ಗಳನ್ನೂ ಓದಿದೆ. "ಅಪ್ಪನ ನೆನಪೂ ಮತ್ತು ಶಾಲ್ಮಲೀ ನದಿ'ಇಷ್ಟವಾಯಿತು. ಆಪ್ತವೆನಿಸಿತು.
ನಾವಡ
ಧನ್ಯವಾದಗಳು ಸರ್. ಆದರೆ ಬರೆಯುವಲ್ಲಿ ಸೋಮಾರಿ ನಾನು. ಪ್ರೋತ್ಸಾಹಕ್ಕೆ ಧನ್ಯವಾದಗಳು.
Post a Comment