ಏನೂ ಮಾಡಲು ತೋಚದೇ, ಮನಸ್ಸಿಗೆ ಯಾವ ಹದವೂ ಸಿಗದೇ, ಬುದ್ಧಿಗೂ ತಾಕದೇ ಬರೀ ಶೂನ್ಯದಲ್ಲಿ ಕಳೆದುಹೋಗುವ ಒಂದು ಕ್ರಿಯೆಯಿದೆಯಲ್ಲ, ಅದು ತಾಕಲಾಟದ್ದು. ನಮಗರಿವಿಲ್ಲದ ಶೂನ್ಯದಲ್ಲೇ ನಾವು ಮೆಲುಕಾಡುತ್ತಿರುತ್ತೇವೆ ಸುಮ್ಮನೇ. ಹಾಗೇ ಇದ್ದುಬಿಡೋಣ ಎಂದರೂ ಏನಾದರೂ ಸಂಭವಿಸಬೇಕು, ಏನೋ ಆಗಲಿದೆ ಸಧ್ಯಕ್ಕೆ ಎನ್ನುವ ಅನ್ನುವ ಯೋಚನೆಯಿದೆಯಲ್ಲ ಅದು ಕಾಯುವಿಕೆ ಹಚ್ಚುತ್ತದೆ. ಸರೀ ಕಾಯುತ್ತ ಕೂರುವ ಕ್ರಿಯೆಯೂ ಬೇಡದ್ದು. ಈ ಚಡಪಡಿಕೆಯೇ ವಿಚಿತ್ರವೆಂದುಕೊಳ್ಳುತ್ತಿರುವಾಗಲೇ ನೆನಪಾಯಿತು ನನ್ನ ಬಾಲ್ಯದ ಗೆಳೆಯನೊಬ್ಬ ತಿಂಗಳ ಹಿಂದೆ ಆರನೇ ತರಗತಿಯ ಹಿಂದಿ, ನಾನ್ ಡಿಟೇಲ್ N.C.E.R.T. ಯ ಪಠ್ಯಪುಸ್ತಕವೊಂದು ಊರಲ್ಲಿ ಸಿಗ್ತಾ ಇಲ್ಲ,ದೆಹಲಿಯಲ್ಲಿ NCERT ಗೆ ಹೋಗಿ ವಿಚಾರಿಸು, ಅಲ್ಲಿ ಖಂಡಿತ ದೊರೆಯುತ್ತವ. ಸಿಕ್ಕರೆ ಒಂದಷ್ಟು ಕೊಂಡು ಕೋರಿಯರ್ ಮಾಡು ಅಂದಿದ್ದ. ಆದ್ರೆ ನನಗೆ ಅರಬಿಂದೋ ಮಾರ್ಗನಲ್ಲಿರುವ NCERT ಆಫೀಸಿಗೆ ಹೋಗಿ ಅವನ ಕೆಲಸ ಮಾಡುವುದಾಗಲಿಲ್ಲ. ಶಾಲೆಯ ಮಕ್ಕಳಿಗೆ ಒಂದು ಪುಟ್ಟ ಸಹಾಯ ಮಾಡುವ ಅವಕಾಶವನ್ನೂ ನಾನು ಕಳೆದುಕೊಂಡೆ ಎನಿಸಿ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಏನು ಮಾಡೋದು ಈ ಊರೇ ಹಾಗೆ. ಈ ಊರೊಂದೆ ಯಾಕೆ ಎಲ್ಲಾ ಮಹಾನಗರಗಳೂ ಹಾಗೇನೆ. ಬೆಳಿಗ್ಗೆ ಎದ್ದರೆ ಗಡಿಬಿಡಿಯಲ್ಲಿ ಆಡುಗೆ ಕೆಲಸ ಮುಗಿಸಿ, ಡಬ್ಬಕ್ಕೆ ತುಂಬಿಸಿಕೊಂಡು. ಮನೆಯವರದ್ದೆಲ್ಲಾ ಡಬ್ಬ ಪ್ಯಾಕ್ ಮಾಡಿ, ಬಸ್ಸಿಗೆ ಓಡಿ, ನೋಯ್ಡಾ ದಿಂದ ಗ್ರೇಟರ್ ಕೈಲಾಶ್ ತಲುಪುವುದರಲ್ಲೇ ಸಾಕೋ ಬೇಕಾಗಿರುತ್ತೆ. ಆಫೀಸಿನಲ್ಲಿ ಗಾಣದೆತ್ತಿನಂತೆ ದುಡಿದು ಸಂಜೆ ಮತ್ತೆ ಸತ್ತೆನೋ ಕೆಟ್ಟೆನೋ ಎಂಡು ಬಸ್ಸಿಗಾಗಿ ಓಡುವ ಗೋಳು. ಇವೆಲ್ಲವನ್ನೂ ನಾವು ನಮ್ಮಿಷ್ಟದಂತೆ ಮಾಡುತ್ತೇವಾ? ಮಾಡಬೇಕು ಅನಿವಾರ್ಯ, ಬದುಕುವುದಕ್ಕಾಗಿ ಇವೆಲ್ಲವನ್ನೂ ನಾವು ಯಂತ್ರದಂತೆ ತಿರುಗುತ್ತಾ ಸವೆಯುತ್ತಾ ಹೋಗುತ್ತಿರುತ್ತೇವೆ. ನಿಲ್ಲಲು ಪುರುಸೊತ್ತಿಲ್ಲದೇ. ಇನ್ನು ಇತರ ಕೆಲಸಗಳನ್ನು ಅದೂ ಸುತ್ತಾಡುವ- ಹುಡುಕುವ ಕೆಲಸವೆಂದರೆ ಬೇಡವೆನಿಸುತ್ತದೆ. ಹೀಗಾಗಿ ಪುಸ್ತಕಕ್ಕಾಗಿ ನನಗೆ ಓಡಾಡಲು, ಶ್ರಮಪಡಲು ಆಗಲೇ ಇಲ್ಲ. ಆಗಲಿಲ್ಲ ಎನ್ನುವುದಕ್ಕಿಂತ ನಾನೇ ಹೆಚ್ಚು ಒತ್ತು ಕೊಟ್ಟು ಮನಸ್ಸಿನಿಂದ ಮಾಡಲು ಪ್ರಯತ್ನಿಸಲಿಲ್ಲವೆನ್ನಬಹುದು. ಈಗ ಹೀಗೆ ಸುಮ್ಮನೇ ಶೂನ್ಯತೆಯಲ್ಲಿ ಮೆಲಕಾಡುವಾಗ ಈ ಗಿಲ್ಟು ಕಾಡತೊಡಗಿ ಕಸಿವಿಸಿ ಹೆಚ್ಚಾಗತೊಡಗಿತು. ಪಾಪ ಅವನು ಏನು ತಿಳಿದುಕೊಂಡನೋ ಎನೋ? ಮಕ್ಕಳ ಪರೀಕ್ಷೆಯ ಕಾಲ ಬೇರೆ. ಮನಸ್ಸು ತಡೆಯದೇ ಫೋನಾಯಿಸಿದೆ. ಆಗ ಮಾತನಾಡಲಾಗಲಿಲ್ಲ. ಕೊನೆಗೆ ಅವನೇ ಫೋನಾಯಿಸಿದಾಗ ನನ್ನ ಅಪರಾಧೀ ಭಾವನೆಗಳನ್ನೆಲ್ಲಾ ಅವನ ಮುಂದೆ ತೋಡಿಕೊಂಡು ಕ್ಷಮೆ ಬೇಡಿದೆ. ಅಯ್ಯೋ ಇರಲಿ ಬಿಡು, ಕೊನೆಗೂ ಆ ಪುಸ್ತಕಗಳು ಸಿಗಲಿಲ್ಲ. ಬೇರೆ ಎರ್ಪಾಟು ಮಾಡಲಾಯಿತು. ನೀನೇನೂ ಬೇಸರ ಪಡಬೇಡಾ ಎಂದು ಸಮಾಧಾನಿಸಿದ.
ಇದೇ ಕಸಿವಿಸಿಯನ್ನು ಎದೆಯಲ್ಲಿ ಬಚ್ಚಿಟುಕೊಂಡೇ ಊರಿಗೆ ಹೋದೆ, ಊರಿಗೆ ಬಂದರೆ ಹೇಳು ಮಾರಾಯ್ತಿ, ನಾನೇ ಅಂಕೋಲಾದಿಂದ ಬಂದು ಭೆಟ್ಟಿಯಾಗ್ತಿನಿ, ಎಷ್ಟೊಂದು ವರುಷಗಳಾದವು ನಿನ್ನ ನೋಡಿ. ಎಂದಿದ್ದ ಅವನ ಮಾತುಗಳು ನೆನಪಿದ್ದರೂ ಕೂಡ ಒಂದು ಬರಿಯೂ ಅವನಿಗೆ ಪೋನಾಯಿಸಲಿಲ್ಲ, ನಾ ಬಂದ ಸುಳಿವೂ ಕೊಡಲಿಲ್ಲ.ಅದೇ ಸಮಯಕ್ಕೆ ಊರಲ್ಲಿ ನಡೆದ ಮುನೇಶ್ವರನ ಗುಡಿ ಜಾತ್ರೆಗೂ ನನ್ನ ಮೌನಕ್ಕೂ , ತಲೆಮರೆಸಿಕೊಳ್ಳುವುದಕ್ಕೂ ಸೇರಿಸಿ ಥಳಕು ಹಾಕಿಬಿಟ್ಟೆ.
ಏಯ್..ಬಾರೋ ನಾನು ಊರಲ್ಲಿದ್ದೇನೆ, ನಿನ್ನ ನೋಡ್ಬೇಕು ಅನಿಸಿದೆ, ಬಂದು ಹೋಗು ಒಮ್ಮೆ’ ಎಂದು ಬಾಲ್ಯ ಸಹಜ ಸಲುಗೆಯಿಂದ ಕೂಡ ಹೇಳಲಾರದೇ, ಬಂದು ಹೋಗಿದ್ದು ಕೂಡ ಸುಳಿವು ಸಿಗದಂತೆ, ಗಾಳಿಯಂತೆ ಹೋಗಿ, ಗಾಳಿಯಂತೆ ಹಾರಿ ಬಂದಿದ್ದೆ ಮತ್ತೆ ದೆಹಲಿಗೆ.
ಈಗ ಅದ್ನ್ನೇ ನೆನ್ಸಿಕೊಂಡು ಥೂ ದರಿದ್ರದ ಮನಸ್ಸಿದು ಎನ್ಸಿ ಬೈದುಕೊಳ್ತಾ ಇದ್ದಿನಿ. ಎನಾದ್ರೂ ಹರ ಸಾಹಸ ಮಾಡಿಯಾದ್ರೂ ಅವನೋದಿಸುವ ಶಾಲೆ ಮಕ್ಕಳಿಗಾಗಿ ಪುಸ್ತಕಗಳನ್ನು ಖರೀದಿಸಿ ಕಳಿಸಬಹುದಿತ್ತು. ಆಗಿದ್ದು ಆಯಿತು ಇನ್ನೂ ಮುಂದಾದರೂ ಹೀಗೆ ಶೂನ್ಯದಲ್ಲಿ ತಡಕಾಡುವ ಬದಲು, ಬಂದ ಅವಕಾಶ, ಆಶಯಕ್ಕೆ ಅನುಗುಣವಾಗಿ ಇನ್ನೊಬ್ಬರಿಗಾಗಿ ತುಸುವಾದರೂ ಶ್ರಮಪಡುವ ಮನೋಬಲ, ಧಾವಂತದ ನಡುವೆಯೂ ಎಲೆಯ ಮರೆಯಂತೆ ಮರೆಯಾದ,ಸೆಲೆಯಂತೆ ಆಗಾಗ ಎದೆಗೆ ಚಿಮ್ಮುವ ಹೊಮ್ಮಿ ಮುದನೀಡುವ ಸ್ನೇಹವನ್ನು ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಹುನ್ನಾರನ್ನು ತುಸುವಾದರೂ ಮೈಗೂಡಿಸಿಕೊಳ್ಳಬೇಕೆಂದು ನಿರ್ಧರಿಸಿದೆ.
ಇನ್ನೊಮ್ಮೆ ಊರಿಗೆ ಬಂದರೆ ಖಂಡಿತ ನಿನಗೆ ತಿಳಿಸಿ ಬರುವೆ. ನೆನಪಾದಾಗ, ಸಮಯ ಸಿಕ್ಕಾಗ ಮಾತಾಡ್ತಾ ಇರೋಣ.
ಸ್ನೇಹದಿಂದ.....
No comments:
Post a Comment