Friday, January 18, 2008

ಕಪ್ಪ್ಯೂಚಿನೋ ಮತ್ತು ಮನಸ್ಸಿಲ್ಲದ ಮನಸ್ಸು

ಇವತ್ತು ಯಾವುದರಲ್ಲೂ ಮನಸ್ಸೇ ಹತ್ತುತ್ತಿಲ್ಲ, ಮನಸ್ಸೆಲ್ಲ ಕಲಸು ಮೇಲೋಗರವಾಗಿದೆ. ಊಟ ತಿಂಡಿ ಇತ್ಯಾದಿಗಳೂ ಬೇಡವೆನ್ನಿಸುವಷ್ಟು. ಕೆಲವೊಮ್ಮೆ ಅರ್ಥವೇ ಆಗುವುದಿಲ್ಲ ನಮ್ಮವರೆನ್ನುವ ಜನ ನಮ್ಮಿಂದ ಎನು ಬಯಸುತ್ತಾರೆ. ಬೇರೆಯವರು ಹೋಗಲಿ ಮನೆಯಲ್ಲಿನ ಗಂಡನೇ ಅವಳು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಅಂತಾ ತನ್ನ ಕೋಲಿಗ್ಸ್ ಹತ್ತಿರ ಹೇಳಿಕೊಂಡ್ರೆ ಹೆಣ್ಣಾಗಿ, ಹೆಂಡತಿ ಎಂಬ ನಾಮಫಲಕದಲ್ಲಿ ಜೀವನ ಸವೆಸಿ ಇಂಥ ಪುರಸ್ಕಾರ ದೊರೆತರೆ ಏನು ಮಾದುವುದು. ಬೆಳಿಗ್ಗೆ ಆಫಿಸಿನಲ್ಲಿ ಕುಳಿತು ಕೊಳಗಳಂಥಾ ಕಣ್ಣುಗಳಲ್ಲಿ ನೀರು ತುಂಬಿ ಕುಳಿತವಳಿಗೆ ಶೋಭಾನಾ ಮಾತನಾಡಿಸಿದ್ದೇ ಸಾಕಾಯಿತು ದಳ ದಳನೇ ಅಳತೊಡಗಿದಳು. ಹೆಣ್ಣು ಜೀವವೇ ಇಷ್ಟು. ಮನಸ್ಸಿಗೆ ಹಚ್ಚಿಕೊಂಡವ ತನಗೆ ಏನೂ ಹಚ್ಚಿಕೊಂಡಿಲ್ಲ ಎನ್ನುವ ರೀತಿ ವ್ಯವಹರಿಸುತ್ತಾನೆ. ಅತ್ತ ತನ್ನನ್ನು ಬಿಡಲೂ ಆರ ಇತ್ತ ತನ್ನನ್ನು ಚೆನ್ನಾಗಿ ಕಾಳಜೀಪೂರ್ವಕವಾಗಿ ನಡೆದುಕೊಳ್ಳಲೂ ಆರ. ಅಥವಾ ತಾನೇ ಅವನನ್ನು ಅಷ್ಟು ಹಚ್ಚಿಕೊಂಡು ಒದ್ದಾಡುತ್ತಿದ್ದಾಳೆ ಎನಿಸುತ್ತದೆ. ಆತ ಖಂಡಿತವಾಗಿಯೂ ತನ್ನನ್ನು ಹಚ್ಚಿಕೊಂಡಿಲ್ಲ ಅಷ್ಟಾಗಿ. ಇಲ್ಲಾಂದರೆ ಅವನೂ ಸ್ಪಂದಿಸುತ್ತಿದ್ದ ತನ್ನ ನೋವಿಗಳೊಂದಿಗೆ. ಥೂ ಎಂದು ಜೀವ ನೊಂದು ಹೋಗಿದೆ, ದಿನಾ ದಿನಾ ಸಾಯುವುದಕ್ಕಿಂತ ಒಮ್ಮೆಲೇ ಸಾಯುವುದು ಲೇಸು. ಹಾಗಂತ ಆತ್ಮಹತ್ಯೆ ಮಾಡಿಕೊಳ್ಳುವಷ್ಟೂ ತಾನು ಸೋತಿಲ್ಲ. ತನಗೆ ಯಾವ ಗಂಡಸಿನ ಆಸರೆಯೂ ಬೇಕಿಲ್ಲ ಒಬ್ಬಳೇ ಬದುಕಬಹುದು ಎನಿಸಿ ತುಸುಮಟ್ಟಿಗೆ ಸಮಾಧಾನವಸಿದರೂ ಬೇರೆನೋ ಏನೋ ಯೋಚಿಸಿದರೆ ಅದಕ್ಕೂ ಯಾವ ದಾರಿಯೂ ತೋಚುತ್ತಿಲ್ಲ. ಹಾಳು ಮನಸ್ಸು.
ಬ್ರೆಡ್ ಆಂಡ್ ಮೋರ್ ರೆಸ್ಟುರಾ ದಲ್ಲಿ ಕಪ್ಪ್ಯೂಚಿನೋ ಕಪ್ ತುಂಬ ನೊರೆ ನೊರೆಯಾಗಿ ಇಟ್ಟುಕೊಂಡು ಮನಸ್ಸನ್ನು ಕೆಡಿಸುವ, ದಿನವನ್ನು ಹಾಳುಮಾಡುವ ಯಾವ ಯೋಚನೆಗಳೂ ಕಾಡದಂತೆ ಮನಸ್ಸನ್ನು ಶಾಂತಗೊಳಿಸುತ್ತಾ, ಎದುರಿಗೆ ಘಮಘಮಿಸುವ, ಇಡೀ ದಿನದ ರುಚಿಯನ್ನೂ, ಸಾರವನ್ನೂ ತನ್ನಲ್ಲೇ ಬಚ್ಚಿಟ್ಟುಕೊಂಡಂತಾ, ಹೊರಗಿನ ಛಳಿಯನ್ನೂ, ಟೆಂಪರೇಚರನ್ನೂ ನೆನೆಯದೇ ಬರೀ ಕಾಯುತ್ತಾ ಕುಳಿತಿರುವ ಬಿಸಿ ಬಿಸಿ ಕಪ್ಪ್ಯೂಚಿನೋ ಹೀರುತ್ತಾ ಹೀರುತ್ತಾ ಎಷ್ಟು ಹಿತವಾಯಿತೆಂದರೆ, ಮನಸ್ಸೆಲ್ಲಾ ಹಿತವನ್ನೂ ಬೆಚ್ಚಗಿನ ಭಾವವನ್ನು ತುಂಬಿಕೊಂಡಂತೆ,ಚೇತೋಹಾರಿಯಾಗಿತ್ತು. ಬಹುಶಃ ಸ್ವಲ್ಪ ಹೊತ್ತಿನ ಮುಂಚೆ ಅವನು ಹೇಳಿದ ಮಾತುಗಳು ಎಲ್ಲಿಲ್ಲದ ಸಂತೋಷವನ್ನು, ಕೇಳಿದ ಕರಣಗಳಿಗೆ, ಮನಸ್ಸಿಗೂ ಸಮಾಧಾನವನ್ನು ನೀಡಿದ್ದವು. ’ಏನು ಗಳಿಸಬೇಕಂದರೆ ನಾನು ಕೋಟಿಗಟ್ಟಲೇ ಗಳಿಸಬಹುದು, ಆದರೆ ನಿನ್ನೊಂದಿಗೆ ಹೀಗೆ ಕಪ್ಪ್ಯುಚೀನೋ ಕುಡಿಯುವ, ನೀನು ಅನನ್ಯತೆಯಲ್ಲಿ ಕಾಫಿಯನ್ನು ಆನಂದಿಸುತ್ತಾ ನಿನ್ನ ಕಣ್ಣಿನಲ್ಲಿ ಜಿನುಗುವ ಖುಶಿಯನ್ನು ಕಾಣುವ ಕಂಡು ಖುಶಿ ಪಡುವ ಕ್ಷಣಗಳನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ’ ನನ್ಗೇನಿದೆಯೋ ಅದರಲ್ಲೇ ನಾನು ಸಂತೃಪ್ತ ಎನ್ನುವ ಅವನ ಮಾತುಗಳು ಸವಿಯಾದ ಕಪ್ಪ್ಯೂಚಿನೋದಕ್ಕಿಂತ ರುಚಿಯಾಗಿದ್ದವೆನ್ನಬಹುದಿತ್ತು. ಖಂಡಿತವಾಗಿಯೂ ಅವು ನಾಟಕೀಯತೆಯಲ್ಲಿ ಆಡಿದ ಮಾತುಗಳಾಗಿರಲಿಲ್ಲ, ಅವಳು ಮನಸ್ಸಿನಲ್ಲಿ ನೂರುಬಾರಿ ಹೇಳಿಕೊಂಡಳು.

ಎಲ್ಲರೂ ಕೆಟ್ಟವರಿರುವುದಿಲ್ಲ, ಒಳ್ಳೆಯವರೂ ಇದ್ದಾರೆ ಲೋಕದಲ್ಲಿ. ಬರೀ ದುಡ್ಡು ದುಡ್ಡು ಅಂತಾ ಸಂಬಂಧಗಳನ್ನು ಅಲಕ್ಷಿಸುವ, ಸಮಯವಿರದವರಲ್ಲಿ ಅಂತಕರಣವನ್ನು ಯಾಚಿಸುತ್ತಾ ಬದುಕುವುದಕ್ಕಿಂತ ಹೀಗೆ ಇದ್ದುದರಲ್ಲೇ ನಾನು ಸಂತೃಪ್ತನಾಗಿದ್ದೇನೆ ಎನ್ನುವ ವ್ಯಕ್ತಿಯ ಜತೆ ಕೆಲಕಾಲ ಕಾಫಿ ಕುಡಿಯುತ್ತಾ ಮತ್ತೆ ಇಂಥ ಯೋಚನೆಯ ಗಂಡಸು ಒಬ್ಬನಾದರೂ ಇದ್ದಾನಲ್ಲಾ ಎಂದು ಮನಸ್ಸು ತಿಳಿಯಾಗಿ ಹಾಗೇ ತಿಳಿನಗು ಮುಖದ ಮೇಲೆಲ್ಲಾ ಹರಡುವುದನ್ನೂ, ಆ ನಗುವಿನಲ್ಲಿ ಕರಗುತ್ತಾ ಕಪ್ಪುಚೀನೋವನ್ನೂ ತನ್ನ ನಗುವನ್ನೂ ಒಟ್ಟಿಗೇ ಹೀರುವ ಅವನ ಕಣ್ಣುಗಳನ್ನೂ ನೋಡುತ್ತಾ ಹಾಗೇ ಕುಳಿತುಬಿಟ್ಟಳು ಮನಸ್ಸನ್ನೂ , ಬೆಳಗಿನ ಕಣ್ಣಿರನ್ನೂ , ಬೈಗಳನ್ನೂ ಮರೆಯುತ್ತಾ.

No comments: