ವಿನಾಕಾರಣ ನಿನ್ನೊಂದಿಗೆ ಮುನಿಸ್ಕೊಂಡು ಮಾತುಬಿಟ್ಟಿದ್ದೆ. ಗೊತ್ತು ನಿನ್ನದೇನೂ ಅಂಥಾ ಮಹಾ ತಪ್ಪಿರಲಿಲ್ಲ ರಾಜಾ. ಮುನಿಸಿಕೊಳ್ಳುವ ಕಾರಣವೂ ಇರಲಿಲ್ಲ. ಆಗಿದ್ದು ಇಷ್ಟೇ ! ನೀನು ಜಯನಗರದ ನಿನ್ನ ಆಫೀಸಿನಿಂದ ದಿನಕ್ಕೊಮ್ಮೆಯಾದರೂ ನಾನುಳಿದುಕೊಂಡ ನನ್ನ ಗೆಳತಿಯ ಮನೆಯಿದ್ದ ವಿಜಯನಗರಕ್ಕೆ ಬರಲಿ, ಬಂದೇ ಬರುತ್ತಿಯೆಂದು ನಿರೀಕ್ಷಿಸಿದ್ದೆ. ಆದರೆ ನಾನಂದುಕೊಂಡಂತೆ ನಿನಗೆ ಬರಲಾಗಿರಲಿಲ್ಲ, ನಿನ್ನವೇ ಆದ ಕೆಲಸದ ಒತ್ತಡಗಳ ನಡುವೆ. ನಾನು ಬೇಸರ, ಮುನಿಸಿನಿಂದಲೇ ತಂಗಿಯ ಮನೆಗೆ, ದೊಡ್ಡನೆಕ್ಕುಂದಿಗೆ ಹೊರಟು ಬಂದಿದ್ದೆ. ನೀನು ಮಾತಾಡಿಸುವ ಪ್ರಯತ್ನ ಪಟ್ಟು, ಕೊನೆಗೆ ಸುಮ್ಮನಾಗಿದ್ದೆ. ನೀನು ನಿನ್ನ ಜಾಗದಲ್ಲಿ ಸರಿಯಿದ್ದೆ, ನಾನು ನನ್ನದೇ ತರ್ಕದಲ್ಲಿ. ಮೊದಮೊದಲು ಸಿಟ್ಟಿನಲ್ಲಿ ಗೊತ್ತಾಗದೇ ಕಳೆದ ದಿನಗಳನ್ನು ಮುಂದೆ ಹಾಗೆ, ನೀನಿಲ್ಲದ ಕ್ಷಣಗಳನ್ನು, ದಿನ ಕಳೆಯುವುದೇ ಕಷ್ಟವಾಗಿ ಹೋಯಿತು. ಕ್ಷಣಗಳು ಯುಗವಾಗಿ ಹಿಂಸಿಸತೊಡಗಿದ್ದವು. ಅಗಲಿಕೆಯ ನೋವು ಕಣ್ಣಿರಾಗಿ ಹರಿಯತೊಡಗಿತ್ತು. ನನ್ನದೇ ಹಠ, ನನ್ನದೇ ಮುನಿಸಿನಲ್ಲಿ ಎಂಥದೋ ದೊಡ್ಡ ಕಾರಣವಿರಬಹುದು ಎಂದೇ ತಿಳಿದಿದ್ದ ನನ್ನ ಭ್ರಮೆ ನೀನು ದೂರವಾಗುತ್ತಲೂ, ಅಲ್ಲ, ನಿನ್ನಿಂದ ನಾನು ದೂರವಾಗುತ್ತಲೇ ಗಾಳಿ ಹೋದ ಬಲೂಲಿನಂತಾಗತೊಡಗಿತ್ತು. ಮನಸ್ಸು ನಿನ್ನನ್ನು ನೆನೆದು ನೆನೆದು ನೋಯುತ್ತಿತ್ತು, ಬೆಂದು ಕರಕಲಾಗತೊಡಗಿತ್ತು. ನೀನಿಲ್ಲದ ಬದುಕು ಇಷ್ಟು ರಸಹೀನವೇ ? ಇದುವರೆಗೆ ಗೊತ್ತಿಲ್ಲದ ಸತ್ಯವೊಂದು ನನ್ನನ್ನು ಇನ್ನಷ್ಟು ನಿನ್ನ ಹತ್ತಿರ ಬರುವಂತೆ ಮಾಡಿತ್ತು. ಆ ನಾಲ್ಕೈದು ದಿನಗಳು ನಾನುಭವಿಸಿದ ನರಕಯಾತನೆಯೇ ಇದಕ್ಕೆ ಸಾಕ್ಷಿ. ನೀನು ಪಟ್ಟ ನೋವು ನಿನ್ನ ಎಸ್.ಎಮ್.ಎಸ್.ನಿಂದ ಗೊತ್ತಾಗುತ್ತಿದ್ದರೂ ನಾನೇ ಸರಿಯೆಂಬ ನನ್ನ ಅಹಂಕಾರ ನಿನ್ನನ್ನು ಕರೆಯುವಂತೆ ಮಾಡಗೊತ್ತಿರಲಿಲ್ಲ. ನನಗೆ ಗೊತ್ತು ನೀನಂಥಾ ಕಟುಕನಲ್ಲ. ನನ್ನ ಒಂದು ಕರೆಗೆ ಕರಗಿಹರಿಯುವ ಸೆಲೆಯಾಗಿಬಿಡುತ್ತಿ. ಮುದ್ದುಗರೆಯುವ ಮೋಡವಾಗಿ ಬಿಡುತ್ತಿ. ನಾನು ನಿನ್ನ ಪ್ರೇಮದ ಬಿಸಿಯಲ್ಲಿ ಮೇಣವಾಗಿ ಕರಗುತ್ತೇನೆ. ನೀನು ನನ್ನನ್ನೂ ನನ್ನ ಅವಿವೇಕವನ್ನೂ ಮನ್ನಿಸಿ, ಮತ್ತೆ ಬಾಚಿಕೊಂಡು ಮುತ್ತಿನ ಮಳೆಗರೆಯುತ್ತಿ. ಮೋಡಗಟ್ಟಿದ ನೋವೆಲ್ಲ ಧಾರಾಕಾರವಾಗಿ ಸುರಿದಾಗಲೇ ಮನಸ್ಸು ಹಗುರವಾಗುವುದು. ಎಂದೆಲ್ಲ ನಾನೇ ನನ್ನ ಯೋಚನೆಯಲ್ಲಿ ಕನಸು ಕಾಣುತ್ತಿದ್ದೇನೆ ಹೊರತು ನಿನ್ನನ್ನು ಹೇಗಿದ್ದೀಯಾ ಅಂತಾ ಕೂಡ ಕೇಳಲು ಧೈರ್ಯಮಾಡಲಿಲ್ಲ ರಾಜಾ. ಆದರೆ ಒಂದು ಕ್ಷಣವೂ ನಿನ್ನನ್ನಗಲಿ ನಾ ಬದುಕಲಿಲ್ಲ, ಉಸಿರಾಡುವ ಶವದಂತಾಗಿದ್ದೆ. ಬದುಕೆಂದರೆ ನೀನು, ನೀನೆಂದರೆ ನನ್ನ ಸುಂದರ ಬದುಕು. ಇದೇ ಸತ್ಯ, ಇದೇ ನಿತ್ಯ.
ಸಹನೆ ಕುಸಿಯತೊಡಗಿತ್ತು,ಮುನಿಸಿನ ಜಾಗವೆಲ್ಲ ಪಶ್ಚಾತ್ತಾಪ ತುಂಬಿಕೊಂಡು ನಿನ್ನನ್ನು ಯಾವಾಗ ನೋಡುವೇನೋ? ಈ ಕಣ್ಣುಗಳು ಎಂದು ನಿನ್ನನ್ನು ಕಣ್ಣತುಂಬ ತುಂಬಿಕೊಂಡು , ಅಲ್ಲೇ ಬಚ್ಚಿಟ್ಟುಕೊಳ್ಳುತಾವೋ ಎನಿಸುವಷ್ಟು ತೀವ್ರವಾದ ವೇದನೆ, ಆಸೆ, ಹಂಬಲ, ನಿನ್ನ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಹರಿಯತೊಡಗಿತ್ತು, ಎದೆಯಲ್ಲಿ ಹಾಗೇ ಹನಿಯತೊಡಗಿತ್ತು. ತಡೆಯಲಾರದೇ ಭಾನುವಾರದಂದು ನಿನ್ನ ಗೆಳೆಯನಿಗೆ ಹೇಳಿದೆ ನಮ್ಮಲ್ಲ ಜಗಳದ ಸುದ್ದಿ, ಆತ ಕೇಳಿ ಸುಮ್ಮನೆ ನಗಾಡಿದ. ಏನು, ನೀವು ಚಿಕ್ಕ ಮಕ್ಕಳಂತೆ ಆಡ್ತೀರಾ. ಬಹುಶಃ ಅವನು ನಿನಗೆ ಹೇಳಿರಬಹುದು,ನಾನು ಕಾಲ್ ಮಾಡಿದ ಬಗ್ಗೆ. ನಿನ್ನಿಂದ ಯಾವ ಕಾಲೂ ಬರಲಿಲ್ಲ. ಇಡೀ ದಿನ ಜಾತಕ ಪಕ್ಷಿಯಂತೆ ಕಾ ದು.. , ಸಂಜೆ ನಾನೇ ನಿನಗೆ ಪೋನಾಯಿಸಿದೆ. ನೊಂದ ಧ್ವನಿಯಲ್ಲಿ. ಬೆಂದ ಮನದಿಂದ ನೋವೇ ಕಣ್ಣೀರಾಗಿ, ಮತ್ತೆ ಮತ್ತೆ ಒಳಗೇ ಬಿಕ್ಕುತ್ತಾ ನಿನ್ನೊಂದಿಗೆ ಮಾತಿಗಿಳಿದಿದ್ದೆ. ನೆನಪಿದೆಯಾ? ಏನೆಲ್ಲ ಮಾತಾಡಿದೆವು? ಯಾವುದೂ ನೆನಪಿಲ್ಲ. ಇಬ್ಬರೂ ಕರಗಿ ನೀರಾಗಿದ್ದೆವು. ಈ ಕ್ಷಣಕ್ಕಾಗಿಯೇ ಹಾತೊರೆಯುತ್ತಿದ್ದೇವು. ಆದರೆ ನೀನು ಕರೆಯ ಕೇಳಿ ಓಡಿ ಬರುವ ಕರುವಿನಂತೆ, ಹಠ ಮರೆತು ಓಡಿ ಬರುವ ಮುದ್ದು ಮಗುವಿನಂತೆ ಬೈಕ್ ಏರಿ ಹೊರಟೇ ಬಿಟ್ಟೆ. ಅಬ್ಬಾ... ನಾಲ್ಕೈದು ದಿನ ಪಟ್ಟ ಸಂಕಟ,ನೋವು, ವನವಾಸ, ಪರಿತಪಿಸಿದ್ದು ಎಲ್ಲ ಕ್ಷಣದಲ್ಲಿ ಮರೆತು ನೀ ಬರುವ ದಾರಿಯನ್ನೇ ಕಾಯತ್ತಿದ್ದೆ.
ಗಾಳಿಯಲ್ಲಿ ಬೈಕ್ ಓಡಿಸಿಕೊಂಡು ಬಂದವನಂತೆ ೧೫-೨೦ ನಿಮಿಷದಲ್ಲಿ ನೀನು ನನ್ನೆದುರಿಗೆ, ಬೈಕ್ ಮೇಲೆ ಹಸಿರು ಜಾಕೆಟ್, ಹೆಲ್ಮೆಟ್ ಹಾಕ್ಕೊಂಡು, ನಿನ್ನ ತೇವದ ಕಣ್ಣುಗಳು ನನ್ನನ್ನು ಅಡಿಯಿಂದ -ಮುಡಿವರೆಗೆ ತೋಯಿಸುತ್ತಿದ್ದವು. ಇನ್ನು ಮುಂದೆ ಹೀಗೆಲ್ಲ ಚಿತ್ರಹಿಂಸೆ ಕೊಡಬೇಡಾ, ನೀನೂ ನರಳಬೇಡ ಎನ್ನುವಂತೆ ಆ ಜೋಡಿ ಕಂಗಳು ಆರ್ದ್ರವಾಗಿ, ಹಿಡಿಯಾಗಿ ನನ್ನ ಕರುಳನ್ನು ಹಿಂಡುತ್ತಿದ್ದವು. ನಾನು ಮರುಮಾತಾಡದೇ ಜತೆಯಲ್ಲಿ ತಂಗಿ ಇದ್ದದ್ದೂ ಮರೆತು ನಾನು ಈಗ ಬರ್ತೀನಿ, ಏ.ಟಿ.ಏಮ್.ಗೆ ಹೋಗ್ಬೇಕು ಎಂದು ನಿನ್ನ ಹಿಂದೆ ಬೈಕ್ ಏರಿ ಕುಳಿತೇ ಬಿಟ್ಟೆ. ಮನೆದಾಟಿ ಮುಂದೆ ಮೇನ್ ರೋಡಿಗೆ ಸೇರುವ ಮೊದಲೇ ನಾನು ಹಿಂದಿನಿಂದ ಗಟ್ಟಿಯಾಗಿ ತಭ್ಬಿಕೊಂಡು ನಿನ್ನ ಬೆನ್ನು ತೋಯಿಸುತ್ತಿದ್ದೆ. ನೀನು ಇಡೀ ದಿನ ಕುಳಿತು, ನೋವ ಮರೆಯಲು ಡ್ರಿಂಕ್ಸ್ ಮಾಡಿದ್ದು ನಿನ್ನ ಹತ್ತಿರಕ್ಕೆ ಬಂದಾಗಲೇ ಗೊತ್ತಾಗಿತ್ತು. ಹೃದಯವೆ ಒಡೆದು ಹೋಗುವಂತಾ ನೋವು, ನರಳಿಕೆ, ಅಗಲಿಕೆ ಮಿಲನದಲ್ಲಿ ಬಿಕ್ಕುತ್ತಿತ್ತು. ನೀನು ಮೌನವಾಗಿ ಗಾಡಿ ಓಡಿಸುತ್ತಿದ್ದರೂ ನೀನು ಆಗಾಗ ಕಣ್ಣು ಒರೆಸಿಕೊಳ್ಳುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು. ಸಾರೀ ರಾಜಾ....ಕ್ಷಮಿಸಿಬಿಡು ಇನ್ನೆಂದು ಹೇಗೆ ಹುಚ್ಚಿ ತರಾ ಆಡಲ್ಲಾ, ನಿನಗೆ ನೋವು ಕೊಡಲ್ಲಾ ..ಏನೇನೋ ಮನ ಬೇಡುತ್ತಿತ್ತು, ಆದರೆ ಮಾತು ಮೌನವಾಗಿ , ಮೌನ -ಮಾತುಗಳು ನಿಶ್ಯಬ್ದವಾಗಿ ನಮ್ಮ ಮಧ್ಯೆ ಕುಳಿತಿತ್ತು, ನಮ್ಮನ್ನೇ ನೋಡುತ್ತಿತ್ತು. ಅಲ್ಲಿ ಇಲ್ಲಿ ಸುತ್ತಾಡಿ , ತಲೆಗೆ ತೋಚಿದ್ದು ಮಾತಾಡಿ ಕೊನೆಗೆ ವಾಪಸ್ಸು ಮನೆಗೆ ಮರಳುವ ಹಾದಿಯಲ್ಲಿ ಏನೂ ತೋಚದೇ ಒಂದು ಕಡೆ ನೀನು ಗಕ್ಕನೇ ಬೈಕ್ ನಿಲ್ಲಿಸಿದೆ, ನಾನು ಬೈಕ್ ಹಾರಿ ಇಳಿದು ಮುಂದೆ ಬಂದು ಗಟ್ಟಿಯಾಗಿ ತಬ್ಬಿಕೊಂಡು, ಮುದ್ದುಗರೆದು, ಒಂದೇ ಒಂದು ಕ್ಷಣ ಕೈ ಜಾರಿ ಹೋಗದಂತೆ , ಹಿಡಿದೇ ಬಿಟ್ಟೆನೆನ್ನುವ ಹಪಿಹಪಿಯಲ್ಲಿ, ಕವ್ವನೇ ಕವಿದ ಕತ್ತಲಲ್ಲಿ, ನಿನ್ನೊಳಗೆ ನನ್ನನ್ನು ತುಂಬಿಕೊಡುವ, ಜೀವ ಜೀವ ಬೆರೆಸುವ, ನಿನ್ನ ನೋವನ್ನೆಲ್ಲ ಹೀರುವಂತಾ ಸಿಹಿ-ಸಿಹಿಯಾದ ಮುತ್ತೊಂದು ರಸನಿಮಿಷದಲ್ಲಿ ಮತ್ತೇರಿ, ಎರಡು ಮನಗಳನ್ನು ಸಾಂತ್ವನಗೊಳಿಸತೊಡಗಿ, ಅಷ್ಟೇ ಚುರುಕಿನಿಂದ ತಟ್ಟನೇ ಬೇರೆಯಾಗಿ, ನಿನ್ನ ಭುಜದಕ್ಕೆ ವಿರಮಿಸಿತು. ಮುಂದೆ ಮಾತುಗಳು ಬೇಕಿರಲಿಲ್ಲ.
ರಾಜಾ....ಅಂದೇ ನಾನು ನಿನ್ನ ಪ್ರೀತಿಯಲ್ಲಿ ನನ್ನ ಬದುಕಿನ ಭರವಸೆಯನ್ನು ಕಂಡಿದ್ದೆ. ಸಾಕಲ್ಲವಾ ಇಷ್ಟು.
No comments:
Post a Comment