Wednesday, December 5, 2007

ಹೀಗೆ ಒಂದಿಷ್ಟು

ದೆಹಲಿಯಲ್ಲಿ ಇನ್ನೇನು ಛಳಿ ಬರುತ್ತದೆ ಅಂದುಕೊಂಡಾಗ್ಲೇ ಛಳಿಗಾಲ್ ಬಂದೇ ಬಿಟ್ಟಿತು. ಕೊರೆಯುವ ಛಳಿ, ಮಸಕು ಮಸಕು ಮಂಜು ಕವಿದ ಮುಂಜಾವಿನಲ್ಲಿ ಎದ್ದು ತೆಲೆಯಿಂದ ಕಾಲಿನವರೆಗೂ ಬೆಚ್ಚಗೆ ಟೊಪ್ಪಿ, ಕಾಲುಚೀಲ, ಕೈಚೀಲ ( ಗ್ಲವ್ಸ್), ಒಂದೆರಡು ಸ್ವೇಟರ್ಗಳನ್ನು ಹಾಕಿಕೊಂಡು ಮನೆಯಿಂದ್ ಹೊರಗೆ ಹೇಗಪ್ಪಾ ಹೋಗೋದು ಅಂತ್ ಮನಸ್ಸು ಹಿಂದೇಟು ಹಾಕ್ತಾ ಇದ್ದ್ರೂ ಗಟ್ಟಿ ಮನಸ್ಸಿನಿಂದ ಬೆಳ್ಗಿನ ವಾಕ್ ಹೋಗೋದೂ ಅಂದ್ರೆ ಒಂತರಾ ಮಜಾ, ಒಂತರಾ ಮುಜುಗರಾ ಅನ್ಸುತ್ತೆ. ಮಜಾ ಯಾಕಂದ್ರೆ ಬೆಳ್ಳಂ ಬೆಳಗ್ಗೆ ಕೆಲವೊಮ್ಮೆ ದಟ್ಟವಾದ ಹೊಗೆ ತುಂಬಿಕೊಂಡಂಥಾ ಮಂಜು ಕವಿದ ನಸುಕು ನಾನು ಶೀಮ್ಲಾದಲ್ಲೋ , ಹಿಮವತ್ ಪರ್ವತದಲ್ಲೋ ಇದ್ದಿರಬಹುದೆಂಬ ಮುದವನ್ನೂ ಮನಸ್ಸಿನೊಳಗೆ ತುಂಬಿಕೊಳ್ಳುತ್ತಾ ನಾವು ದೆಹಲಿಯಲ್ಲಿ ನಮ್ಮ ಜೀವನವನ್ನು ಹೀಗೇ ಕಳೆದೆವಲ್ಲಾ, ಒಳ್ಳೇದೋ ಕೆಟ್ಟದೋ ಅಂತೂ ನಮ್ಮ ಜೀವನ ಸಾಗಿ ಹೋಯಿತು. ಊರಿನ ನೆನಪಿನ ಹಂಗೂ ಕೂಡ ಈ ಮಂಜಿನ ಹೊದಿಕೆಯಂತೆ ಸದಾ ನಾವು ನಮ್ಮ ನೆನೆಪಲ್ಲಿ ಹೊದ್ದುಕೊಂಡಿರುತ್ತೇವೇನೋ ಅನಿಸುತ್ತದೆ. ಇರ್ಲಿ ಇಲ್ಲಿನ ಬದುಕಿನ ವಿಚಾರ ಮಾತಾಡೋಣ ,

ಛಳಿಗಾಲದಲ್ಲಿ ಇಲ್ಲಿ ಮುಖ್ಯವಾಗಿ ತಿಂಡಿ ತಿನಿಸು ಮಾಡುವ್ದೆಂದ್ರೆ ಮೂಲಿ ಪರೋಟ (ಮೂಲಂಗಿ), ಗೋಭಿ ಪರೋಟ ( ಕ್ಯಾಬಿಜ್) ಕಾಲಿಫ್ಲವರೂ ಆದೀತು. ಮೇಥೀ ಪರೋಟ ( ಮೆಂತ್ಯ ಸೊಪ್ಪು ಹಿಟ್ಟಿಗೆ ಸೇರಿಸಿ ಮಾಡಿದ್ದು), ಕೊತ್ತಂಬರೀ ಸೊಪ್ಪಿನ ಪರೋಟ, ಆಲೂ ಪರೋಟ, ಊಟಕ್ಕೆ ಪುಲಾವ್ - ಸರಸೋಂಕಾ ಸಾಗ್, ( ಸಾಸಿವೆಸೊಪ್ಪಿನ ಸಾಗು), ಮಕ್ಕೆ ಕೀ ರೋಟಿ, (ಮುಸುಕಿನ ಜೋಳದ ರೊಟ್ಟಿ ), ಪಾಲಕ್ ಪನೀರ್, ಮಟರ್ ಪನೀರ್ , ಇತ್ಯಾದಿ ತರಹಾವರೀ ಪದಾರ್ಥಗಳು. ಹಸೀ ಬಟಾಣಿ, ಕ್ಯಾರೆಟ್, ಕೋಸು, ಪಾಲಕ್ ಇತ್ಯಾದಿ ತರಕಾರಿಗಳು ಇಲ್ಲಿ ಛಳಿಗಾಲದ್ಲ್ಲಿ ಹೇರಳವಾಗಿ ದೊರೆಯುತ್ತವಾದ್ದರಿಂದ ಊಟ ತಿಂಡಿಗಳೂ ವೈವಿಧ್ಯಪೂರ್ಣವಾಗಿರುತ್ತವೆ. ಹವಾಮಾನವೂ ವೀಪರೀತ ಇಲ್ಲಿ. ಛಳಿಗಾಲದಲ್ಲಿ ವಿಪರೀತ ಛಳಿ, ಬೇಸಿಗೆಯಲ್ಲಿ ವಿಪರೀತ ಸೆಕೆ. ಜನರ ರೀತಿ ರಿವಾಜುಗಳೂ ವಿಪರೀತಗಳಿರುತ್ತ್ವೆ. ಜಾಸ್ತಿ ಹಚ್ಚಿಕೊಂಡ್ರೆ ಬಿಡಿಸಿಕೊಳ್ಳುವುದೇ ಕಷ್ಟವಾಗಬಹುದು ಅಷ್ಟು ಭಾರಿಯಾಗುತ್ತದೆ ಹಚ್ಚಿಕೊಂಡಿದ್ದು. ಕೊನೆಗೆ ತೆಲೆ ಚಚ್ಚಿಕೊಂಡು ಕೈತೊಳೆದುಕೊಳ್ಳಬೇಕಾಗುತ್ತದೆ. ಒಂದೊಂದು ಅನುಭವವೂ ಒಂದು ಪಾಠ ಬಿಡಿ. ಹೀಗಾಗಿ ನನಗೆ ಒಮ್ಮೊಮ್ಮೆ ನಾವು ಸಂಕುಚಿತ ಮನೋಭಾವದವರಿರ್ಬೇಕು ಅಂತಾ ಅನಿಸುತ್ತೆ. ಇಲ್ಲಿನವರಂತೆ ಗಹಗಹಿಸಿ ನಕ್ಕಿರುವುದಿಲ್ಲ. ನಗುವುಗೂ ನಮ್ಮ ಸುತ್ತಲಿನ ಪರಿಸರಕ್ಕೂ, ಅಥವಾ ನಗುವಿಗೂ ನಮ್ಮ ಮನೋಭೂಮಿಕೆಗೂ ಹತ್ತಿರ ಹತ್ತಿರ ಸಂಬಂಧವಿದೆ. ಮನದುಂಬಿ ನಗುವುದಕ್ಕೂ ನಮಗೆ ಸಾಧ್ಯವಿಲ್ಲವಾಗಿದೆ ಈಗಿನ ಯಾಂತ್ರಿಕ ಬದುಕಿನ ಹೋರಾಟದಲ್ಲಿ. ಮಾನಸಿಕ ಒತ್ತಡ, ಕೆಲಸ ಕಾರ್ಯಗಳ ಒತ್ತಡಗಳು, ನಿತ್ಯ ಬದುಕಿನ ಸಮಸ್ಯೆಗಳು ಹೀಗೇ ಬೇಕು ಬೇಡದ ಯಾವುದೋ ಒಂದು ಅಗೋಚರ ಒತ್ತಡ ನಮ್ಮನ್ನೆತ್ತಲೋ ಎಳೆಯುತ್ತಿರುತ್ತದೆ ಮತ್ತು ಅದು ಎಳೆದತ್ತ ನಾವು ಸಾಗುತ್ತಿರುತ್ತೇವೆ.

ಛಳಿಗಾಲದಲ್ಲಿ ಬಸ್ಸುಗಳಲ್ಲಿ ಜನ ಕಡಲೇಕಾಯಿಯನ್ನು ಧಾರಾಳವಾಗಿ ತಿನ್ನುತ್ತಾರೆ ಮತ್ತು ಯಥೇಚ್ಛವಾಗಿ ಸಿಪ್ಪೆಗಳನ್ನು ಕಾಲಿನ ಕೆಳಗೆ ಚೆಲ್ಲುತ್ತಾ, ಅದರ ಸಿಪ್ಪೆ, ಹುಡಿ ಇತ್ಯಾದಿಗಳು ತಮ್ಮ ಶಾಲು, ಸ್ವೇಟರ್ ಗಳ ಮೇಲೆಲ್ಲ ಉದುರಿಸಿಕೊಳ್ಳುತ್ತ ತಿನ್ನುವುದರ ಆನಂದದ ಉತ್ತುಂಗದಲ್ಲಿರುತ್ತಾರೆ. ಅಯ್ಯೋ, ಬರೀ ಬಸ್ಸುಗಳಲ್ಲಿ ಮಾತ್ರ ತಿನ್ನಬೇಕೂ ಅಂತಿಲ್ಲ. ಬಸ್ಸ್ ಸ್ಟ್ಯಾಂಡ್ಗಳಲ್ಲಿ, ಪಾರ್ಕುಗಳಲ್ಲಿ, ದಾರಿ ಹೋಕರು, ವಾಹನ ಚಾಲಕರು, ಮುದುಕರು, ಬಾಲಕರು. ಹಿರಿಯರು, ಕಿರಿಯರು ಹೀಗೆ ಪ್ರತಿಯೊಬ್ಬರೂ ಕಡಿಮೆ ಬೆಲೆಗೆ ಸಿಕ್ಕುವ ಈ ಬಡವರ ಬಾದಾಮು ಎಂದು ಹೆಸರುವಾಸಿಯಾದ ಕಡಲೆಕಾಯಿಯನ್ನು ಸವಿಯುತ್ತಿರುತ್ತಾರೆ. ದೆಹಲಿಯ ಛಳಿಗಾಲವೆಂದರೆ ಆಸು ಪಾಸಿನ ಕಾಲೋನಿಗಳಲ್ಲಿ ಜನರು ಹೊರಸು ( ಚಾರ್ ಪಾಯಿ) ಹಾಕಿಕೊಂಡು ಬಿಸಿಲು ಕಾಯಿಸುತ್ತಾ ಅಕ್ಕ ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯುತ್ತಾ ಮಧ್ಯೆ ಮಧ್ಯೆ ಹಸೀ ಶುಂಠೀ, ಏಲಕ್ಕಿ ಹಾಕಿದ ಚಹಾ ಹೀರುತ್ತ ಸಂಜೆ ನಾಲ್ಕು ಐದರ ವರೆಗೆ ಬಿಸಿಲಿನಲ್ಲೇ ಇದ್ದು ಸಂಜೆ ಸೂರ್ಯ ಬೇಗ ಪಶ್ಚಿಮದ ತನ್ನ ಊರಿಗೆ ತೆರೆಳುವ ಮೊದಲು ತಮ್ಮ ತಮ್ಮ ಮನೆ ಒಳಗೆ ಸೇರಿಕೊಳ್ಳುತ್ತಾರೆ. ಹರಟೆಯ ಜತೆ ಕೆಲವರು ಗಂಡನಿಗೋ ಮಕ್ಕಳಿಗೋ ಸ್ವೇಟರ್ ಹೆಣೆಯುತ್ತಿರುತ್ತಾರೆ, ಕಾಯಿಪಲ್ಲೆಯನ್ನು ಸುಲಿದು, ಬಿಡಿಸಿ ಹೆಕ್ಕಿ ಇಟ್ಟುಕೊಳ್ಳುತ್ತಿರುತ್ತಾರೆ. ಒಟ್ಟಿನಲ್ಲಿ ಛಳಿಗಾಲವೆಂದರೆ ವಿರಾಮದ ಕಾಲ, ತಿಂದುಂಡು ಮಜವಾಗಿ ಛಳಿಯನ್ನು ಸವಿಯುವ ಕಾಲವೆಂದು ದೆಹಲಿಯ ಜನಜೀವನ ನೋಡಿದಾಗ್ ಅನಿಸುತ್ತದೆ.

ಇನ್ನು ಆಫೀಸಿಗೆ ಹೋಗುವವರಾದ್ರೆ ಅವರಿಗೆ ಛಳಿಯಾದ್ರೇನು ? ಬಿಸಿಲಾದರೇನು? ಓಡುವುದೇ ಬದುಕಿನ ಪರಮ ಗುರಿ, ಎಲ್ಲೇ ಇರಲಿ, ಹೇಗೇ ಇರ್ಲಿ ಈ ಸುಡುಗಾಡು ಆಫೀಸಿಗೆ ಸಾಯ್ತಾ ಬೀಳ್ತಾ ಹೋಗ್ಲೇ ಬೇಕು. ಯಾವುದೇ ನಿತ್ಯಜೀವನದ ಅಂದ ಚೆಂದಗಳನ್ನು ಸವಿಯುವಾ ಅಂತಾ ನಿಂತುಕೊಳ್ಳ್ದ ಹಾಗೇ ಓಡ್ತಾನೇ ಇರ್ಬೇಕು. ಎಲ್ಲಾದ್ರೂ ಈ ಮಂಜು ಚೆನ್ನಾಗಿದೆ, ಈ ಬಿಸಿಲು ಹಿತ್ವಾಗಿದೆ ಅಂತಾ ನೋಡ್ತಾ ಅನುಭವಿಸ್ತಾ ನಿಂತುಕೊಂಡು ಬಿಟ್ರೆ ಹೋಯ್ತು. ಗಾಡಿ ಹೋಗಿರುತ್ತೆ, ಸಮಯವೂ ಕೈಯಿಂದ ಸೋರಿ ತಪ್ಪಿಸಿಕೊಂಡು ಬಿಟ್ಟಿರುತ್ತೇ. ಮನೆಯಲ್ಲಿದ್ದವ್ರಿಗೆ ಹೊರಗಡೆ ದುಡಿಯುವವರೇ ಧನ್ಯರು ಅನಿಸಿದರೆ, ಹೊರಗೆ ದುಡಿದು ಬಸವಳಿದು ಬರುವವರಿಗೆ ಮನೆಯಲ್ಲಿರುವವರೇ ಪುಣ್ಯಮಾಡಿದ್ವ್ರು, ಮಜಾವಾಗಿದ್ದಾರೆಂದು ಅರೆಕ್ಷಣ ಹೊಟ್ಟೆಕಿಚ್ಚಾಗ್ದೇ ಇರಲ್ಲ.

ದೆಹಲಿಯಲ್ಲಿ ಜನೇವರೀ ತಿಂಗಳ ವಿಪರೀತ ಛಳಿಯಲ್ಲಿ ಜನ ೩ -೪ ದಿನ ಸ್ನಾನವಿಲ್ಲದೇ ಇರುತ್ತಾರೆ ಎನ್ನುವುದನ್ನು ಬಿಟ್ಟ್ರೆ ಬಾಕಿ ಎಲ್ಲಾ ಚೆನ್ನಾಗಿದೆ. ಈ ದೇವ್ರಿಗೂ ನಮ್ಮನ್ನು ಕಂಡ್ರೆ ತುಂಬಾ ಪ್ರೀತಿ ಇದೆ. ಅದಕ್ಕೆ ನಾವು ದೆಹಲಿಗೆ ಅಂಟಿಕೊಂಡಿದ್ದೇವೆ. ನಮ್ಮೂರಿನ ಕಡಬು ಹೋಳಿಗೆಗೆ ಇಲ್ಲಿನ ಪರೋಟಗಳನ್ನೋ, ಪಕೋಡಗಳನ್ನೋ ಹೋಲಿಸುತ್ತಾ ತುಲನಾತ್ಮಕವಾದ ಜೀವನ ಸಾಗಿಸುತ್ತಿದ್ದೇವೆ.

ನಿಮ್ಮಲ್ಲಿ ಹೇಗಿದೆ ಹವಾಮಾನ ? ಛಳಿ ಶುರುವಾಗಿದೆಯಾ ?

3 comments:

ಬಾನಾಡಿ said...

lದೆಹಲಿಯಲ್ಲಿನ್ನೂ ಅಂಥ ಚಳಿ ಶುರುವಾಗಿಲ್ಲಂತ ಸುದ್ದಿ. ನೀವೀಗಲೇ ಕಂಬಳಿ (ಅಥವಾ ರಜಯಿ) ಹೊದ್ದು ಬ್ಲಾಗ್ ಆರಂಭಿಸಿದ್ದೀರಿ. ಕನ್ನಡ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಬರೆಯುತ್ತಿರಿ.

ರೇಣುಕಾ ನಿಡಗುಂದಿ said...

Blog bareyuva pratna vashte. Beligge 4.30 ge eddu nodi, Eluvadakke bedavaguttade, adu manasina bhava ashte, rajai bagge eli helide? No

Prakash Shetty said...

ದೆಹಲಿ ಚಳಿ ಯಾರನ್ನೂ ಬಿಡಲ್ಲ...

ನಿರೂಪಣೆ ... ಚೆನ್ನಾಗಿದೆ...

ಮಾತೃ ಹೃದಯ ... ಮಹಿಳಾ ದಿನಚರಿಯನ್ನು ಕಟ್ಟಿಕೊಂಡು ಬರುವ ಈ ಲೇಖನ ದೆಹಲಿ ಬದುಕನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ.

ಲೇಖಕರ ದೈನಂದಿನ ಬದುಕಿನ ಸುಖ ದುಃಖ ಇದರಲ್ಲಿದೆ...